ಬೆಂಗಳೂರು:580 ವರ್ಷಗಳಲ್ಲೇ ಅತ್ಯಂತ ದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ (Lunar Eclipse 2021) ಇಂದು ಸಂಭವಿಸಲಿದೆ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ ಎಂದು ಖಗೋಳ ಭೌತಶಾಸ್ತ್ರಜ್ಞರು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ ಮತ್ತು ಅಸ್ಸೋಂನ ಕೆಲವು ಪ್ರದೇಶಗಳಲ್ಲಿ ಅಪರೂಪದ ವಿದ್ಯಮಾನವು ಗೋಚರಿಸಲಿದೆ. ಭಾಗಶಃ ಗ್ರಹಣವು (The longest partial lunar eclipse) ಇಂದು ಮಧ್ಯಾಹ್ನ 12.48ಕ್ಕೆ ಆರಂಭವಾಗಿ ಸಂಜೆ 4.17ಕ್ಕೆ ಮುಕ್ತಾಯವಾಗಲಿದೆ. ಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡ್‌ಗಳಾಗಿದ್ದು, ಇದು 580 ವರ್ಷಗಳಲ್ಲೇ ಅತಿ ದೀರ್ಘವಾಗಿದೆ. ಅರುಣಾಚಲ ಪ್ರದೇಶ ಮತ್ತು ಅಸ್ಸೋಂನ ಕೆಲವು ಪ್ರದೇಶಗಳು ಪೂರ್ವ ದಿಗಂತಕ್ಕೆ ಬಹಳ ಹತ್ತಿರದಲ್ಲಿ ಚಂದ್ರೋದಯದ ನಂತರ ಭಾಗಶಃ ಗ್ರಹಣದ ಕೊನೆಯ ಕ್ಷಣಗಳನ್ನು ಕಾಣಬಹುದು.
ಫೆಬ್ರವರಿ 18, 1440ರಂದು ಕೊನೆಯ ಬಾರಿಗೆ ಇಂತಹ ಧೀರ್ಘಾವಧಿಯ ಭಾಗಶಃ ಚಂದ್ರಗ್ರಹಣ ಸಂಭವಿಸಿತ್ತು. ಮುಂದಿನ ಬಾರಿ ಇದೇ ರೀತಿಯ ವಿದ್ಯಮಾನ 2669ರ ಫೆಬ್ರವರಿ 8ರಂದು ಸಂಭವಿಸಲಿದೆ. ಚಂದ್ರನು ರಕ್ತಕೆಂಪು ಬಣ್ಣದಲ್ಲಿ (Blood red Moon) ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಭಾಗಶಃ ಚಂದ್ರಗ್ರಹಣವು (The longest partial lunar eclipse) ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಗೋಚರಿಸಲಿದೆ.