ಹೈದರಾಬಾದ್:ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಮಯ್ಯ ತಮ್ಮ ಜಮೀನಿನಲ್ಲಿ ಬೆಳೆದ 20 ಟನ್ ರಕ್ತ ಚಂದನವನ್ನ ತೆಲಂಗಾಣ ಸರ್ಕಾರಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ತೆಲಂಗಾಣ ಸರ್ಕಾರ ಸ್ಥಾಪಿಸಿರುವ ಹರಿತ ನಿಧಿಗೆ ಈ ರಕ್ತಚಂದನವನ್ನ ದರಿಪಲ್ಲಿ ರಾಮಯ್ಯ ದಾನ ನೀಡಿದ್ದಾರೆ. ರಾಮಯ್ಯ ಪರಿಸರ ಪ್ರೇಮಿಯಾಗಿದ್ದು, ಗಿಡ-ಮರಗಳನ್ನು ಪ್ರೀತಿಸುತ್ತಾರೆ.
ರಾಮಯ್ಯ ಅವರು ಪತ್ನಿ ಜಾನಮ್ಮ ಅವರ ಬೆಂಬಲ ಮತ್ತು ಸಹಕಾರದಿಂದ ಸ್ವಂತ ಜಮೀನಿನಲ್ಲಿ ಸಸಿಗಳನ್ನು ಬೆಳೆಸುತ್ತಿದ್ದಾರೆ. ಈ ಇಬ್ಬರೂ ಸೇರಿಕೊಂಡು ಖಮ್ಮಂ ಜಿಲ್ಲೆಯಲ್ಲಿ ಕಳೆದ ನಲವತ್ತು ವರ್ಷಗಳಿಂದ ಮರಗಳನ್ನು ನೆಡುತ್ತಿದ್ದಾರೆ. 20 ವರ್ಷಗಳ ಹಿಂದೆ ಖಮ್ಮಂನ ಗ್ರಾಮಾಂತರ ಮಂಡಲದ ರೆಡ್ಡಿಪಲ್ಲಿ ಗ್ರಾಮದ ತಮ್ಮ ಏಳು ಎಕರೆ ಜಮೀನಿನಲ್ಲಿ 50ಕ್ಕೂ ಹೆಚ್ಚು ಕೆಂಪು ಚಂದನ ಮರಗಳನ್ನು ಈ ದಂಪತಿ ಬೆಳೆಸಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ತೆಲಂಗಾಣ ರಾಜ್ಯಾದ್ಯಂತ ಕೋಟ್ಯಂತರ ಸಸಿ ಮತ್ತು ಮರ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದ ಲಕ್ಷಾಂತರ ಸಸಿಗಳನ್ನು ಅನೇಕರಿಗೆ ಈ ದಂಪತಿ ಉಚಿತವಾಗಿ ವಿತರಿಸುತ್ತಾ ಬಂದಿದೆ. ಕೇಂದ್ರ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಐದು ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ತೆಲಂಗಾಣ ಸರ್ಕಾರಕ್ಕೆ ರಕ್ತಚಂದನ ದಾನ ಮಾಡಿರುವ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ರಾಮಯ್ಯ, ತಮ್ಮ ಕೊನೆಯ ಉಸಿರು ಇರುವವರೆಗೂ ರಾಜ್ಯದಲ್ಲಿ ಹಸಿರನ್ನು ಬೆಳೆಸಲು ಗಿಡಗಳನ್ನು ನೆಡುತ್ತೇನೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಸಿಗಳನ್ನು ನೆಡುವುದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ಏನಿದು ಹರಿತ ನಿಧಿ?:ತೆಲಂಗಾಣದಲ್ಲಿ ಕಾಡಿನ ಪ್ರಮಾಣ ಹೆಚ್ಚು ಮಾಡಲು ಹಾಗೂ ಹಸಿರುಕರಣಕ್ಕೆ ಅಲ್ಲಿನ ಸರ್ಕಾರ ಸ್ಥಾಪಿಸಿದ ನಿಧಿಯಾಗಿದೆ. ಈ ನಿಧಿ ಮೂಲಕ ತೆಲಂಗಾಣ ಸರ್ಕಾರ ಹಸಿರೀಕರಣ ಮಾಡುತ್ತಿದೆ. ಇದಕ್ಕಾಗಿ ಸ್ಥಾಪಿತವಾಗಿರುವ ನಿಧಿಗೆ ರಾಮಯ್ಯ 20 ಟನ್ ರಕ್ತ ಚಂದನವನ್ನು ದಾನ ಮಾಡಿದ್ದಾರೆ. ಈ ಮೂಲಕ ಹಸಿರೀಕರಣಕ್ಕೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆ: ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್