ಭೋಪಾಲ್: ಲೋಕಸಭಾ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಎಂಐಎಂ) ಮಧ್ಯಪ್ರದೇಶದಲ್ಲಿ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಇದಕ್ಕಾಗಿ ಪಕ್ಷವು ಮುಸ್ಲಿಂ ಪ್ರಾಬಲ್ಯವಿರುವಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.
ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬಳಸುವ ಸಾಧ್ಯತೆ ಇದ್ದು, ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಚುನಾವಣೆಗಳ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಎಐಎಂಐಎಂ ಸಜ್ಜಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆ ಪಕ್ಷದ ಸ್ಥಾನಮಾನದ ಭವಿಷ್ಯವನ್ನು ಅನ್ವೇಷಿಸಲಾಗುತ್ತಿದೆ ಎಂದು ಪಕ್ಷದ ಮಧ್ಯಪ್ರದೇಶ ಘಟಕದ ಕಾರ್ಯಕಾರಿ ಅಧ್ಯಕ್ಷ ನಯೀಮ್ ಅನ್ಸಾರಿ ಒಪ್ಪಿಕೊಂಡಿದ್ದಾರೆ.
ಓದಿ:ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ಯಾ ಪೂಜೆ ನೆರವೇರಿಸಿದ ಸಿಎಂ ಚೌಹಾಣ್
ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮತದಾರರಿರುವ ಪ್ರದೇಶಗಳಲ್ಲಿ ಎಐಎಂಐಎಂ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಒವೈಸಿ ನಿರ್ದಿಷ್ಟವಾಗಿ ಇಂದೋರ್, ಭೋಪಾಲ್, ಉಜ್ಜಯಿನಿ, ಖಾಂಡ್ವಾ, ಸಾಗರ್, ಬುರ್ಹಾನ್ಪುರ್, ಖಾರ್ಗೋನ್, ರತ್ಲಂ, ಜಾವ್ರಾ, ಜಬಲ್ಪುರ್, ಬಾಲಘಾಟ್ ಮತ್ತು ಮಾಂಡ್ಸೌರ್ಗಳ ಮೇಲೆ ಕೇಂದ್ರೀಕರಿಸಿದೆ.
ಇಲ್ಲಿಯವರೆಗೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ರಾಜಕೀಯ ಹೋರಾಟ ನಡೆಯುತ್ತಿದೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ತ್ರಿಕೋನ ಹೋರಾಟದಲ್ಲಿ ತೊಡಗಿರುವ ರಾಜ್ಯದ ಕೆಲವು ಭಾಗಗಳಿವೆ. ಎಐಎಂಐಎಂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸ್ಪರ್ಧಿಸಿದರೆ, ಕಾಂಗ್ರೆಸ್ ರಾಜಕೀಯವಾಗಿ ಮತ್ತಷ್ಟು ಹಿನ್ನಡೆ ಅನುಭವಿಸುವ ನಿರೀಕ್ಷೆಯಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.