ಚೆನ್ನೈ, ತಮಿಳುನಾಡು:ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ.ಪನ್ನೀರಸೆಲ್ವಂ ಅವರ ಪುತ್ರ ಹಾಗೂ ತೇಣಿ ಕ್ಷೇತ್ರದ ಸಂಸದ ಒಪಿ. ವೀಂದ್ರನಾಥ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಆರೋಪ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಂಸದ ಒಪಿ ರವೀಂದ್ರನಾಥ್ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶಿವಗಂಗೈ ಜಿಲ್ಲೆಯ ಮಹಿಳೆಯೊಬ್ಬರು ಡಿಜಿಪಿ ಕಚೇರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ದೂರು ದಾಖಲಿಸಿದ ಬಳಿಕ ಸುದ್ದಿಗಾರರನ್ನು ಭೇಟಿ ಮಾಡಿದ ಮಹಿಳೆ, ''2014ರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಒಪಿಎಸ್, ಅವರ ಪುತ್ರ ರವೀಂದ್ರನಾಥ್ ಮತ್ತು ಆತನ ಪತ್ನಿ ಆನಂದಿ ಭಾಗಿಯಾಗಿದ್ದರು. ಈ ವೇಳೆ ನಮ್ಮ ಜತೆ ಅವರ ಸ್ನೇಹ ಬೆಳೆದಿತ್ತು ಎಂದಿದ್ದಾರೆ.
ನಂತರ ದಿನಗಳಲ್ಲಿ ರವೀಂದ್ರನಾಥ್ ಅವರ ಪತ್ನಿ ಆನಂದಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೆ. ಈ ವೇಳೆ, ರವೀಂದ್ರನಾಥ್ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಇದರಿಂದ ಪತಿ-ಪತ್ನಿರಾದ ರವೀಂದ್ರನಾಥ್ ಹಾಗೂ ಆನಂದಿ ನಡುವೆ ಮನಸ್ತಾಪ ಉಂಟಾಗಿತ್ತು. ಅದೇ ವೇಳೆ ಅಂದ್ರೆ 2021 ರಲ್ಲಿ ನನ್ನ ಪತಿ ಮತ್ತು ನಾನು ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ ಪಡೆದೆವು ಎಂದು ಮಹಿಳೆ ಹೇಳಿದ್ದಾರೆ.
ಇದನ್ನು ತಿಳಿದ ರವೀಂದ್ರನಾಥ್ ತನ್ನ ಸ್ನೇಹಿತ ಮುರುಗನ್ ಮೂಲಕ 2022ರ ಅಕ್ಟೋಬರ್‌ನಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೆ, ತನ್ನ ವಾಟ್ಸ್ಆ್ಯಪ್ ಮೂಲಕ ನನಗೆ ಅತ್ಯಂತ ನೀಚ ಪದಗಳಲ್ಲಿ ವಿವರಿಸುತ್ತಾ ಬಂದು ತನ್ನೊಂದಿಗೆ ಸಂಸಾರ ನಡೆಸುವಂತೆ ಒತ್ತಾಯಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.