ನವದೆಹಲಿ: 26 ವಿರೋಧ ಪಕ್ಷಗಳ ಒಕ್ಕೂಟ ತಮ್ಮ ಮೈತ್ರಿಗೆ 'ಇಂಡಿಯಾ' ಹೆಸರನ್ನು ಬಳಸದಂತೆ ತಡೆಯಲು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ 26 ವಿರೋಧ ಪಕ್ಷಗಳು, ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 31 ರಂದು ನಡೆಯಲಿದೆ.
'ಇಂಡಿಯಾ' (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ಹೆಸರಿನ 26 ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ, ಚುನಾವಣಾ ಆಯೋಗ ಮತ್ತು ವಿರೋಧ ಪಕ್ಷಗಳಿಗೆ ನೋಟಿಸ್ ಕಳುಹಿಸುವ ಮೂಲಕ ನ್ಯಾಯಾಲಯ ಉತ್ತರ ಕೇಳಿದೆ. ವಿಚಾರಣೆ ವೇಳೆ ಅರ್ಜಿದಾರರು 'ಇಂಡಿಯಾ' ಪದ ಬಳಕೆ ನಿಷೇಧಿಸುವಂತೆ ಮಧ್ಯಂತರ ಆದೇಶ ನೀಡುವಂತೆ ಕೋರಿದ್ದರು. ಈ ಕುರಿತು ನ್ಯಾಯಾಲಯವು ಇನ್ನೊಂದು ಕಡೆಯವರ ವಾದವನ್ನು ಆಲಿಸಬೇಕು ಎಂದು ಹೇಳಿದೆ.
ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟವನ್ನು ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂದು ಹೆಸರಿಸುವುದರ ವಿರುದ್ಧ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ದೆಹಲಿ ಹೈಕೋರ್ಟ್ ಎಲ್ಲ 26 ವಿರೋಧ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ಸಂಜೀವ್ ನರುಲಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದೆ. ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆ) ಕಾಯಿದೆ, 1950ರ ಸೆಕ್ಷನ್ 2 ಮತ್ತು 3 ಅಡಿ 'ಇಂಡಿಯಾ' ಎಂಬ ಹೆಸರನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಅರ್ಜಿದಾರ ಗಿರೀಶ್ ಭಾರದ್ವಾಜ್ ಅರ್ಜಿಯಲ್ಲಿ ಉಲ್ಲೆಖಿಸಿದ್ದಾರೆ. ಅರ್ಜಿದಾರರ ಪರ ವಕೀಲ ವೈಭವ್ ಸಿಂಗ್ ಅವರು ಈ ಪ್ರಕರಣದಲ್ಲಿ ಇತರ ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಬೇಕು. ಅಲ್ಲದೇ ಈ ವಿಷಯದಲ್ಲಿ ಆರಂಭಿಕ ದಿನಾಂಕವನ್ನು ನೀಡಬೇಕು ಎಂದು ಕೋರಿದರು.