ಶ್ರೀನಗರ:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಎನ್ಡಿಎ ಮೈತ್ರಿಕೂಟವನ್ನು ಕಟ್ಟಿಹಾಕಲು ವಿಪಕ್ಷಗಳ ಸೇರಿಕೊಂಡು ಹೊಸದಾಗಿ ರಚಿಸಿಕೊಂಡಿರುವ I.N.D.I.A ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಕೂಟದ ಭಾಗವಾಗಿರುವ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರೇ ಮೈತ್ರಿಕೂಟದಲ್ಲಿ ಬಿರುಕು ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಸೋಮವಾರ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಮಧ್ಯೆ ಒಡಕು ಇರುವುದು ಸತ್ಯ. ಪಂಚ ರಾಜ್ಯಗಳಲ್ಲಿ ಚುನಾವಣೆಯಲ್ಲೂ ಇದು ಪದೇ ಪದೆ ಗೋಚರಿಸುತ್ತಿದೆ. ಆಂತರಿಕ ಕಚ್ಚಾಟಗಳು ಹೆಚ್ಚಾಗಿವೆ. ಇದು ಇಂಡಿಯಾ ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ಮತ್ತೆ ಸಭೆ ಅಗತ್ಯ:ಸೀಟು ಹಂಚಿಕೆ ವಿಚಾರವಾಗಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಹೇಗೆ ಪರಸ್ಪರ ಕಿತ್ತಾಡಿಕೊಂಡಿವೆ ಎಂಬುದನ್ನು ನಾವು ನೋಡಿದ್ದೇವೆ. ಎರಡೂ ಪಕ್ಷಗಳು ಉತ್ತರಪ್ರದೇಶದ ಎಲ್ಲಾ ಸ್ಥಾನಗಳಲ್ಲಿ ಪ್ರತ್ಯೇಕವಾಗ ಸ್ಪರ್ಧಿಸುವುದಾಗಿ ಹೇಳುತ್ತಿವೆ. ಇದು ಮೈತ್ರಿಗೆ ಒಳ್ಳೆಯದಲ್ಲ. ಬಹುಶಃ ಪಂಚ ರಾಜ್ಯಗಳ ಚುನಾವಣೆಯ ನಂತರ, ನಾವು ಮತ್ತೆ ಭೇಟಿಯಾಗಬೇಕಿದೆ. ಒಟ್ಟಿಗೆ ಮತ್ತೆ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.
ಜಮ್ಮು ಕಾಶ್ಮೀರದಲ್ಲೂ, ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಶನ್ (ಪಿಎಜಿಡಿ) ಪರಸ್ಪರ ಕಿತ್ತಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ಈವರೆಗೂ ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ಕಳೆದ ಹಲವು ತಿಂಗಳಿಂದ ನಮ್ಮನ್ನೇ ಟಾರ್ಗೆಟ್ ಮಾಡಲಾಗಿದೆ. ಅದರೆ, ನಾವು ಯಾರನ್ನೂ ಟೀಕಿಸಿಲ್ಲ. ಕಳೆದ ವಾರ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಿಡಿಪಿ ನಾಯಕರು ನ್ಯಾಷನಲ್ ಕಾನ್ಫರೆನ್ಸ್ ಅನ್ನು ಟೀಕಿಸಿದ್ದಾರೆ. ಅವರ ಬಗ್ಗೆ ಹೇಳಲು ಹೋದರೆ, ಸಾಕಷ್ಟು ದೂರಬಹುದು ಎಂದು ಹೇಳಿದರು.