ನವದೆಹಲಿ:ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ''ಹೆಚ್ಚಿನ ಅಸ್ಥಿರತೆ'' ಇರುವುದರಿಂದ ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಇಂಧನ ಬೆಲೆ ಕಡಿತದ ಕುರಿತು ಮಾಧ್ಯಮ ವರದಿಗಳನ್ನು ಎಂದು ತಳ್ಳಿಹಾಕಿದ ಸಚಿವರು, ಇದು ಕೇವಲ ಊಹಾತ್ಮಕವಾಗಿದೆ. ಇಂಧನ ಲಭ್ಯತೆಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು. ಇತ್ತೀಚೆಗೆ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿದಾಗ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಭಾರಿ ನಷ್ಟವನ್ನು ಅನುಭವಿಸಿವೆ ಎಂದೂ ಅವರು ತಿಳಿಸಿದ್ದಾರೆ.
ಇಂಧನ ಬೆಲೆ ಕಡಿತದ ಕುರಿತು ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಯಾವುದೇ ಚರ್ಚೆಗಳಿಲ್ಲ. ಕಂಪನಿಗಳು ಬೆಲೆಯ ವಿಷಯದಲ್ಲಿ ಸ್ಥಿರ ಮತ್ತು ಸಕಾರಾತ್ಮಕ ಭವಿಷ್ಯದ ಪರಿಸ್ಥಿತಿಯನ್ನು ಬಯಸುತ್ತಿದ್ದಾರೆ ಎಂದು ಪೆಟ್ರೋಲಿಯಂ ಸಚಿವರು ವಿವರಿಸಿದರು. ಇದೇ ವೇಳೆ, ಇತ್ತೀಚಿನ ತಿಂಗಳುಗಳಲ್ಲಿ ಇಂಧನ ಬೆಲೆ ಕಡಿಮೆಯಾದ ಏಕೈಕ ದೇಶ ಭಾರತವಾಗಿದೆ ಎನ್ನುವ ಮೂಲಕ ಅವರು ಗಮನಸೆಳೆದರು.