ಭುವನೇಶ್ವರ (ಒಡಿಶಾ): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದಿದೆ. ಎಲ್ಲರೂ ಪದವಿಯನ್ನೂ ಪಡೆಯದಿದ್ದರೂ ಬಹುತೇಕರು ಶಿಕ್ಷಿತರಾಗಿದ್ದಾರೆ. ಆದರೆ ಮೂಢನಂಬಿಕೆ ಮಾತ್ರ ನಮ್ಮ ದೇಶದಲ್ಲಿ ಅಳಿದಿಲ್ಲ. ಕೆಲ ಅಂಧಾಚರಣೆಗಳು ನಮ್ಮ ನಡುವೆ ಹಾಗೇ ಉಳಿದು ಹೋಗಿವೆ. ಇದರಿಂದ ತೊಂದರೆ ಒಳಗಾಗುತ್ತಿರುವವರ ಧ್ವನಿ ಮಂದವಾಗಿಯೇ ಉಳಿದಿದೆ. ಆದರೆ ಈಗ ಮೂಢನಂಬಿಕೆ ಹೋಗಲಾಡಿಸಲು ಮಹಿಳಾ ಆಯೋಗ ಆದೇಶವನ್ನೇ ಹೊರಡಿಸಿದೆ.
ಒಡಿಶಾದಲ್ಲಿ ಇನ್ನು ಮಹಿಳಾ ಪ್ರಯಾಣಿಕರು ಕೂಡಾ ಮೊದಲಿಗೆ ಬಸ್ ಹತ್ತಬಹುದಾಗಿದೆ. ಮಹಿಳೆಯರ ಘನತೆ ಕಾಪಾಡಲು ಒಡಿಶಾ ರಾಜ್ಯ ಮಹಿಳಾ ಆಯೋಗ (ಒಎಸ್‌ಸಿಡಬ್ಲ್ಯು) ಆದೇಶ ಒಂದನ್ನು ಹೊರಡಿಸಿದೆ. ಅದರಂತೆ ಸಾರಿಗೆ ಇಲಾಖೆ ಮಹಿಳೆಯನ್ನು 1ನೇ ಪ್ರಯಾಣಿಕರಂತೆ ಬಸ್ ಹತ್ತುವುದನ್ನು ತಡೆಯುವಂತಿಲ್ಲ ಎಂದು ನಿರ್ದೇಶನ ನೀಡಿದೆ.
ಸೋನೆಪುರದ ಸಾಮಾಜಿಕ ಕಾರ್ಯಕರ್ತ ಘಾಸಿರಾಮ್ ಪಾಂಡಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗ ಈ ಆದೇಶ ಹೊರಡಿಸಿದೆ. ಭುವನೇಶ್ವರದ ಬಾರಾಮುಂಡಾ ಬಸ್ ನಿಲ್ದಾಣದಲ್ಲಿ ಮೊದಲ ಪ್ರಯಾಣಿಕನಾಗಿ ಬಸ್ ಹತ್ತದಂತೆ ಮಹಿಳೆಯೊಬ್ಬರು ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಪಾಂಡಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಒಂದು ಮೂಢನಂಬಿಕೆ ಇದೆ, ಬಸ್ ಹತ್ತುವ ಮೊದಲ ಪ್ರಯಾಣಿಕರು ಮಹಿಳೆ ಆದಲ್ಲಿ ಅದು ದುರದೃಷ್ಟಕರ ಎಂಬ ಆಚಾರ ಬೆಳದುಕೊಂಡು ಬಂದಿದೆ. ಈ ಮೂಢನಂಬಿಕೆ ಹೋಗಲಾಡಿಸಲು ರಾಜ್ಯ ಮಹಿಳಾ ಆಯೋಗ ಮಧ್ಯಪ್ರವೇಶಿಸಿದೆ. ಮಹಿಳಾ ಪ್ರಯಾಣಿಕರು ದುರದೃಷ್ಟಕರ ಎಂಬ ಕಾರಣಕ್ಕೆ ಇನ್ನು ಮುಂದೆ ಬಸ್ನಲ್ಲಿ ಮೊದಲು 1ನೇ ಪ್ರಯಾಣಿಕರಾಗಿ ಹತ್ತದಂತೆ ತಡೆಯುವುದನ್ನು ನಿಷೇಧಿಸಲಾಗಿದೆ. ಮಹಿಳೆಯರು ಎಲ್ಲಿಂದಲಾದರೂ ಬಸ್ನಲ್ಲಿ ಮೊದಲ ಪ್ರಯಾಣಿಕರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಬಹುದು. ಈ ನಿಯಮವನ್ನು ಈಗ ರಾಜ್ಯದ ಎಲ್ಲ ಬಸ್‌ಗಳಲ್ಲಿ ಅಳವಡಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗ ರಾಜ್ಯ ಸಾರಿಗೆ ಇಲಾಖೆಗೆ ಪತ್ರ ಬರೆದಿದೆ.