ಹೈದರಾಬಾದ್:ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ಅಪಘಾತವು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾಗಿದೆ. 261 ಜನ ಪ್ರಾಣ ಕಳೆದುಕೊಂಡ ಮತ್ತು 900 ಮಂದಿ ಗಾಯಗೊಂಡ ಘೋರ ದುರಂತದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಮೂರು ರೈಲುಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ ನಡೆದ ರಣಭೀಕರ ಘಟನೆಗೆ ತಾಂತ್ರಿಕ ಸಮಸ್ಯೆ ಕಾರಣವೋ ಅಥವಾ ದುರಾಡಳಿತದಿಂದ ಈ ಅವಘಡ ಸಂಭವಿಸಿದೆಯೋ ಎಂಬ ಪ್ರಶ್ನೆಗಳು ಎದ್ದಿವೆ.
ಸರ್ಕಾರದ ಮೂಲಗಳ ಪ್ರಕಾರ, ಪ್ಯಾಸೆಂಜರ್ ರೈಲುಗಳು ಮತ್ತು ಒಂದು ಗೂಡ್ಸ್ ರೈಲು ಭೀಕರ ಈ ದುರಂತಕ್ಕೆ ಕಾರಣವಾಗಿದೆ. ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ 1,257ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಬೆಂಗಳೂರು - ಹೌರಾ ಎಕ್ಸ್‌ಪ್ರೆಸ್‌ನಲ್ಲಿ 1,039 ಜನ ರಿಸರ್ವೇಷನ್ ಮಾಡಿಸಿದ ಪ್ರಯಾಣಿಕರಿದ್ದರು. ಶುಕ್ರವಾರ ರಾತ್ರಿ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದ ಸಮೀಪ ಈ ರೈಲುಗಳು ಹಾಗೂ ಗೂಡ್ಸ್ ರೈಲು ಅಪಘಾತಕ್ಕೀಡಾಗಿ ಪರಸ್ಪರ ಡಿಕ್ಕಿ ಹೊಡೆದಿವೆ. ಪರಿಣಾಮ ಇದುವರೆಗೆ ಸಾವಿನ ಸಂಖ್ಯೆ 261ಕ್ಕೆ ಏರಿದೆ.
ಇದನ್ನೂ ಓದಿ:ಒಡಿಶಾ: ತ್ರಿವಳಿ ರೈಲು ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ
ಆದರೆ, ಈ ಮಾರಣಾಂತಿಕ ರೈಲು ದುರಂತ ಹೇಗೆ ನಡೆದಿದೆ ಎಂಬುದಕ್ಕೆ ಬೇರೆ-ಬೇರೆ ಕಥೆಗಳು ಹರಿದಾಡುತ್ತಿವೆ. ಮೊದಲಿಗೆ ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಳಿತಪ್ಪಿ ಸೈಡ್ ಟ್ರ್ಯಾಕ್‌ನಲ್ಲಿ ಬಿದ್ದಿತ್ತು. ಇದಕ್ಕೆ ಶಾಲಿಮಾರ್ - ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅದರ ನಂತರ, ಕೋರಮಂಡಲ್ ಕೋಚ್‌ಗಳು ಪಕ್ಕದ ಹಳಿಯಲ್ಲಿ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿವೆ ಎಂದು ಹೇಳಲಾಗ್ತಿದೆ.
ಮತ್ತೊಂದೆಡೆ, ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿಕೆ ಬೇರೆಯದ್ದೇ ಆಗಿದೆ. ನಿಲ್ಲಿಸಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ಕೋರಮಂಡಲ್ ಎಕ್ಸ್‌ಪ್ರೆಸ್ ಮೊದಲು ಹಳಿ ತಪ್ಪಿದೆ. ನಂತರ ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ರೈಲು ಕೋರಮಂಡಲ್ ಎಕ್ಸ್ಪ್ರೆಸ್ನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಅಮಿತಾಭ್ ಶರ್ಮಾ ಹೇಳಿದ್ದಾರೆ. ಇದರಿಂದಾಗಿ ಅಪಘಾತದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ರೈಲ್ವೆ ಅಧಿಕಾರಿ ಹೇಳಿದ್ದು, ನಿಜವೇ ಆಗಿದ್ದರೆ ಗೂಡ್ಸ್ ರೈಲು ಇದ್ದ ಹಳಿಯಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್ಗೆ ಹೇಗೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ:ಬಾಲಸೋರ್ ರೈಲು ಅಪಘಾತ- ಸಾವಿನ ಸಂಖ್ಯೆ 261ಕ್ಕೆ ಏರಿಕೆ: ಹಳಿಗಳ ಮೇಲೆ ಮರಣ ಮೃದಂಗ, ಸುಮಾರು 50 ಟ್ರೈನ್ಗಳು ರದ್ದು!
ಇದೇ ವೇಳೆ ಸಿಗ್ನಲ್ ವ್ಯವಸ್ಥೆಯಲ್ಲಿನ ದೋಷದಿಂದ ಈ ದುರಂತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಷ್ಟಾದರೂ ತಾಂತ್ರಿಕ ಸಮಸ್ಯೆಯಿಂದ ಈ ಮಾಹಿತಿ ದೋಷವಾಗಿದೆಯೇ ಅಥವಾ ಇದು ಮಾನವ ದೋಷವೇ ಎಂಬ ಪ್ರಶ್ನೆ ಸಹ ಉದ್ಭವಿಸಿದೆ. ಈ ಅಪಘಾತದ ಬಗ್ಗೆ ವಿರೋಧ ಪಕ್ಷಗಳ ನಾಯಕರು ಕೂಡ ಇದೇ ರೀತಿಯ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿಗ್ನಲಿಂಗ್ ವ್ಯವಸ್ಥೆಯ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ನಾವು ನಂಬಲು ಸಾಧ್ಯವಿಲ್ಲ. ಇದರ ಹಿಂದೆ ಬೇರೆ ಕಾರಣವಿದೆಯೇ ಎಂದು ಟಿಎಂಸಿ ನಾಯಕ ಪ್ರಶ್ನಿಸಿದ್ದಾರೆ.
ರೈಲು ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಇಲಾಖೆಯು ದೇಶಾದ್ಯಂತ ಕವಚ ವ್ಯವಸ್ಥೆಯನ್ನು ಪರಿಚಯಿಸಿದೆ. ಅತ್ಯಂತ ಜನದಟ್ಟಣೆ ಇರುವ ಈ ರಸ್ತೆಯಲ್ಲಿ ಕವಚ ವ್ಯವಸ್ಥೆಯನ್ನು ಏಕೆ ಸ್ಥಾಪಿಸಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ, ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇದನ್ನೂ ಓದಿ:ಭೀಕರ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣ: ಘಟನೆಯ ತನಿಖೆ ಆರಂಭ