ಮಹಾರಾಷ್ಟ್ರ/ಮಧ್ಯಪ್ರದೇಶ:ಅಮರಾವತಿ, ನಾಗಪುರ ಸೇರಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಮತ್ತು ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಉಲ್ಕಾಪಾತವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಉಲ್ಕಾಪಾತವಲ್ಲ, ಉಪಗ್ರಹದ ಅವಶೇಷಗಳು ಎಂದು ತಿಳಿದುಬಂದಿದೆ. ಚಂದ್ರಾಪುರ ಜಿಲ್ಲೆಯ ಸಿಂಧೇವಾಹಿ ತಾಲೂಕಿನ ಲಾಡಬೋರಿ ಗ್ರಾಮದಲ್ಲಿ ಉಪಗ್ರಹದ ಅವಶೇಷಗಳು ಬಿದ್ದಿರುವುದು ಬೆಳಕಿಗೆ ಬಂದಿದೆ. ಖಗೋಳಶಾಸ್ತ್ರಜ್ಞರ ತಂಡವು ಈ ಸ್ಥಳಕ್ಕೆ ತಲುಪಿದ್ದು, ಉಪಗ್ರಹದ ಅವಶೇಷಗಳನ್ನು ಸಂಗ್ರಹಿಸುತ್ತಿದೆ.
ಲಾಡ್ಬೋರಿ ಗ್ರಾಮದಲ್ಲಿ ಶನಿವಾರ ರಾತ್ರಿ ವಿಮಾನ ಪತನವಾದಂತ ಸದ್ದು ಗ್ರಾಮಸ್ಥರಿಗೆ ಕೇಳಿಸಿದೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ನಂತರ ಇದು ಉಪಗ್ರಹ ಅವಶೇಷಗಳೆಂದು ಗೊತ್ತಾಗಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ ಭಾರತೀಯ ಕಾಲಮಾನ ಸಂಜೆ 6.11ಕ್ಕೆ, ಬ್ಲ್ಯಾಕ್‌ಸ್ಕಿ ಎಂಬ ಉಪಗ್ರಹವನ್ನು ನ್ಯೂಜಿಲೆಂಡ್‌ನ ಮಹಿಯಾ ದ್ವೀಪ ಪ್ರದೇಶದಿಂದ ಹಾರಿಬಿಡಲಾಗಿತ್ತು. ಇದೇ ಉಪಗ್ರಹದ ಹಿಂಭಾಗ ಭೂಮಿಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದ್ದು, ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.