ನವದೆಹಲಿ: 9 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ನೋಯ್ಡಾದ ಸೂಪರ್ಟೆಕ್ ಅವಳಿ ಕಟ್ಟಡಗಳು ನೆಲಸಮವಾಗಿವೆ. ಇಂದು ಮಧ್ಯಾಹ್ನ 2:30ಕ್ಕೆ ಎರಡೂ ಗಗನಚುಂಬಿ ಕಟ್ಟಡಗಳನ್ನು ಕ್ಷಣಾರ್ಧದಲ್ಲೇ ಧರೆಗುರುಳಿಸಲಾಯಿತು. ಕಟ್ಟಡಗಳ ನೆಲಸಮ ಕಾರ್ಯಾಚರಣೆಯ ಸ್ಥಳದಲ್ಲಿ 560ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮೀಸಲು ಪಡೆಗಳ 100 ಸಿಬ್ಬಂದಿ, ಎನ್ಡಿಆರ್ಎಫ್ ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು.
70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಅವಳಿ ಕಟ್ಟಡಗಳ ನೆಲಸಮಕ್ಕೆ 3,700 ಕೆಜಿ ಸ್ಫೋಟಕ ಬಳಕೆ ಮಾಡಲಾಯಿತು. ಬೆಳಗ್ಗೆ 6 ಗಂಟೆಯಿಂದಲೇ ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಆರಂಭವಾಗಿತ್ತು. ಮಧ್ಯಾಹ್ನ ಸರಿಯಾಗಿ 2:30ಕ್ಕೆ ಸ್ಫೋಟಕಗಳನ್ನು ಸ್ಫೋಟಿಸುವ ಮೂಲಕ ಧರೆಗುರುಳಿಸಲಾಯಿತು. ಈ ನೆಲಸಮ ಕಾರ್ಯಾಚರಣೆಗಾಗಿಯೇ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಒಂಭತ್ತು ಸೆಕೆಂಡ್ಗಳಲ್ಲೇ ಧ್ವಂಸ: ಈ ಅಕ್ರಮ ಅವಳಿ ಕಟ್ಟಡಗಳು ಕೇವಲ ಒಂಬತ್ತು ಸೆಕೆಂಡ್ಗಳಲ್ಲೇ ನೆಲಕ್ಕುರುಳಿ ಬಿದ್ದವು. ಈ ಕಟ್ಟಡಗಳು ಒಟ್ಟಾರೆ 915 ಫ್ಲಾಟ್‌ಗಳನ್ನು ಒಳಗೊಂಡಿದ್ದವು. ಎರಡೂ ಗೋಪುರಗಳು ಧ್ವಂಸಗೊಳ್ಳುತ್ತಿದ್ದಂತೆ ಇಡೀ ಪ್ರದೇಶದಲ್ಲಿ ದಟ್ಟವಾದ ಧೂಳ ಆವರಿಸಿತ್ತು. ಧ್ವಂಸಗೊಂಡ ಕಟ್ಟಡಗಳ ಪೈಕಿ ಸೆಯಾನೆ ಹೆಸರಿನ ಕಟ್ಟಡವು 29 ಮಹಡಿಗಳು ಹಾಗೂ ಅಪೆಕ್ಸ್ ಎಂಬ ಹೆಸರಿನ ಕಟ್ಟಡವು 32 ಮಹಡಿಗಳನ್ನು ಹೊಂದಿತ್ತು.
ಕಾರ್ಯಾಚರಣೆ ನಡೆದಿದ್ದು ಹೇಗೆ?: ದೇಶದ ಅತಿ ಎತ್ತರದ ಗೋಪುರಗಳಾದ ಇವುಗಳ ನೆಲಸಮ ಕಾರ್ಯಾಚರಣೆಗೂ ಮುನ್ನ ಅತ್ಯಂತ ಮುಂಜಾಗ್ರತೆಯನ್ನು ವಹಿಸಲಾಗಿತ್ತು. ಈ ಕಾರ್ಯಕ್ಕೆ ನೇಮಕವಾಗಿದ್ದ ಮುಂಬೈ ಮೂಲದ ಎಡಿಫೈಸ್ ಇಂಜಿನಿಯರಿಂಗ್ ಸಂಸ್ಥೆಯ ಮಾಸ್ಟರ್ ಬ್ಲಾಸ್ಟರ್ ಚೇತನ್ ದತ್ತಾ ಬಟನ್ ಒತ್ತುವ ಮೂಲಕ ಕಟ್ಟಡಗಳು ನೆಲಸಮಗೊಂಡವು.