ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವಕೋವಿಡ್ ವೈರಸ್ ರೂಪಾಂತರಿ 'ನಿಯೋಕೋವ್' ಬಗ್ಗೆ ಜಗತ್ತಿನಾದ್ಯಂತ ಆತಂಕ ಮೂಡಿದೆ. ಆದರೆ ಬಾವಲಿಯಿಂದ ಹುಟ್ಟಿಕೊಂಡಿರುವ ಈ ವೈರಸ್‌ನಿಂದ ಭಾರತಕ್ಕೆ ಯಾವುದೇ ಅಪಾಯವಿಲ್ಲ ಎಂದು ಭಾರತೀಯ ವಿಜ್ಞಾನಿಗಳು ಹೇಳಿದ್ದಾರೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ, ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (IGIB)ಯ ವಿಜ್ಞಾನಿ ವಿನೋದ್ ಸ್ಕಾರಿಯಾ ಅವರು, ನಿಯೋಕೋವ್ ರೂಪಾಂತರಿಯು ಭಾರತಕ್ಕೆ ಅಪಾಯಕಾರಿಯಲ್ಲ ಎಂದು ತಿಳಿಸಿದ್ದಾರೆ.
ಐಜಿಐಬಿಯು ಜೀನೋಮಿಕ್ಸ್, ಮಾಲಿಕ್ಯುಲರ್ ಮೆಡಿಸಿನ್ ಮತ್ತು ಬಯೋಇನ್‌ಫರ್ಮ್ಯಾಟಿಕ್ಸ್‌ನ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆಯಾಗಿದೆ. ನಿಯೋಕೋವ್ ಹೊಸ ರೂಪಾಂತರವಲ್ಲ ಎಂದು ಪ್ರತಿಪಾದಿಸಿರುವ ಸ್ಕೇರಿಯಾ, ಇದು ಬಾವಲಿ ಕೊರೊನಾ ವೈರಸ್ ಮತ್ತು ಮನುಷ್ಯರಿಗೆ ಸೋಂಕು ತಗುಲುವುದಿಲ್ಲ. ಅಲ್ಲದೆ ಪ್ರಾಣಿಗಳಿಂದ ಜನರಿಗೆ ವೈರಸ್ಗಳು ಹರಡುವಿಕೆಯು ತೀರ ಅಪರೂಪ ಎಂದು ಹೇಳಿದ್ದಾರೆ.
ನಿಯೋಕೋವ್ ವೈರಸ್ ಮೊಟ್ಟ ಮೊದಲು ನಿಯೋರೋಮಿಯಾ ಎಂದು ಕರೆಯಲಾಗುವ ಬಾವಲಿಗಳ ಜಾತಿಯಲ್ಲಿ ಪತ್ತೆಯಾಗಿದೆ. ನಿಯೋಕೋವ್ ಜೀನೋಮ್ ಶೇ. 85ರಷ್ಟು ಎಂಇಆರ್ಎಸ್-ಕೋವ್(MERS-CoV) ನ್ನು ಹೋಲುತ್ತದೆ.
ಮಾನವ ಮತ್ತು ಪ್ರಾಣಿಗಳ ವೈರಸ್‌ಗಳ ಜೀನೋಮ್ ಸಿಕ್ವೆನ್ಸಿಂಗ್ ಹಾಗೂ ವೈರಸ್‌ಗಳ ವರ್ಣಪಟಲವನ್ನು ತಿಳಿದುಕೊಳ್ಳುವುದು ಪ್ರಮುಖವಾಗಿದೆ. ಸದ್ಯ ನಿಯೋಕೋವ್ ಪ್ರಾಣಿಗಳ ನಡುವೆ ಮಾತ್ರ ಹರಡುತ್ತಿದೆ. ಪ್ರಾಣಿಗಳಿಂದ ವೈರಸ್ ಅಂಟುವುದು ಅಪರೂಪವಾಗಿದ್ದು, ನಿಯೋಕೋವ್ ಮಾನವನ ಎಸಿಇ ಗ್ರಾಹಕಗಳೊಂದಿಗೆ ಅಂತರ್ಗತವಾಗಿ ಸೇರಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೃತಕ ರೂಪಾಂತರಗಳ ಪರಿಣಾಮವು ಹೆಚ್ಚಿರಬಹುದು ಎಂದು ಸ್ಕೇರಿಯಾ ಹೇಳಿದರು.