ಪಾಟ್ನಾ:ಬಿಹಾರ ಸಿಎಂ ಹಾಗೂ INDIA ಕೂಟದ ಪ್ರಮುಖ ನೇತಾರ ನಿತೀಶ್ ಕುಮಾರ್ ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಿತೀಶ್ ಕುಮಾರ್, ಮೋದಿ ಅವರನ್ನು 2024 ರ ಚುನಾವಣೆಯಲ್ಲಿ ಕಟ್ಟಿಹಾಕಲು ರಣತಂತ್ರ ರೂಪಿಸುತ್ತಿದ್ದಾರೆ. ಇಂಡಿಯಾ ಕೂಟದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿತೀಶ್ ಕುಮಾರ್, ಇಂದು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಇದೇ ವೇಳೆ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಅಂಗವಾಗಿ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಕೂಡಾ ಸಲ್ಲಿಸಲಿದ್ದಾರೆ. ವಾಜಪೇಯಿ ಸಂಪುಟದಲ್ಲಿ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನವದೆಹಲಿಗೆ ಭೇಟಿ ನೀಡುವ ಬಿಹಾರ ಸಿಎಂ ನಿತೀಶ್ ಕುಮಾರ್ ಕೇವಲ ಅರವಿಂದ್ ಕೇಜ್ರಿವಾಲ್ ಅವರನ್ನು ಮಾತ್ರವೇ ಭೇಟಿ ಆಗುವುದಿಲ್ಲ. ಇಂಡಿಯಾ ಮೈತ್ರಿಕೂಟದ ಪ್ರಮುಖ ನೇತಾರರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ಮಾಡುವ ಸಾಧ್ಯತೆಗಳಿವೆ.
ಇಂಡಿಯಾ ಮೈತ್ರಿಕೂಟದ ಮೊದಲ ಸಭೆ ಪಾಟ್ನಾದಲ್ಲಿ ನಡೆದಿತ್ತು. ಈ ವೇಳೆ, ಮೋದಿ ಎದುರಿಸಲು ಸಮಾನ ಮನಸ್ಕ ಪಕ್ಷಗಳು ಸೇರಿ ಮೈತ್ರಿಕೂಟ ರಚನೆ ಮಾಡುವ ಪ್ರಸ್ತಾವ ಮಂಡಿಸಲಾಗಿತ್ತು. ಮೈತ್ರಿಕೂಟ ರಚನೆಯ ರೂಪುರೇಷೆಗಳನ್ನು ತಯಾರಿಸಲಾಗಿತ್ತು. ಅದಾದ ಬಳಿಕ ಮೈತ್ರಿಕೂಟದ ಎರಡನೇ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಮೈತ್ರಿಕೂಟಕ್ಕೆ INDIA ಎಂದು ನಾಮಕರಣ ಮಾಡಲಾಗಿತ್ತು.