ಉದಯಪುರ (ರಾಜಸ್ಥಾನ):ಪ್ರವಾದಿ ಮಹಮದ್ರ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕೆ ಹತ್ಯೆಗೀಡಾಗಿದ್ದ ಕನ್ಹಯ್ಯಾಲಾಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನ್ಯಾಯಾಲಯಕ್ಕೆ ಶುಕ್ರವಾರ ಚಾರ್ಜ್ಶೀಟ್ ಸಲ್ಲಿಸಿದೆ. ಇದರಲ್ಲಿ ಇಬ್ಬರು ಪಾಕಿಸ್ತಾನಿಯರು ಸೇರಿ 9 ಮಂದಿ ವಿರುದ್ಧ ಆರೋಪಿಸಿದೆ.
ರಾಜಸ್ಥಾನದಲ್ಲಿ ದರ್ಜಿಯಾಗಿದ್ದ ಕನ್ಹಯ್ಯಾಲಾಲ್ನನ್ನು ಇಬ್ಬರು ಮತಾಂಧರು ಕೊಲೆ ಮಾಡಿದ್ದರು. ಇದು ದೇಶಾದ್ಯಂತ ತೀವ್ರ ಸಂಚಲನ ಉಂಟು ಮಾಡಿತ್ತು. ಪ್ರಕರಣದ ತನಿಖೆ ನಡೆಸಿದ ಎನ್ಐಎ 177 ದಿನಗಳ ಬಳಿಕ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಇದರಲ್ಲಿ ಮೊಹಮ್ಮದ್ ರಿಯಾಜ್ ಅಟ್ಟಾರಿ, ಮೊಹಮ್ಮದ್ ಗೌಸ್, ಮೊಹ್ಸಿನ್ ಖಾನ್ ಅಲಿಯಾಸ್ ಭಾಯಿ, ಆಸಿಫ್ ಹುಸೇನ್, ಮೊಹಮ್ಮದ್ ಮೊಹ್ಸಿನ್, ವಾಸಿಂ ಅಲಿ, ಫರ್ಹಾದ್ ಮೊಹಮ್ಮದ್ ಶೇಖ್, ಮೊಹಮ್ಮದ್ ಜಾವೇದ್ ಮತ್ತು ಮುಸ್ಲಿಂ ಖಾನ್ ಅಲ್ಲದೇ, ಪಾಕಿಸ್ತಾನದ ಕರಾಚಿ ನಿವಾಸಿಗಳಾದ ಸಲ್ಮಾನ್ ಮತ್ತು ಅಬು ಇಬ್ರಾಹಿಂರನ್ನು ಆರೋಪಿಗಳು ಎಂದು ಗುರುತಿಸಿದೆ. ಇಬ್ಬರು ಪಾಕಿಸ್ತಾನಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅದು ಹೇಳಿದೆ.
ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತರುವವರೆಗೆ ಮತ್ತು ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಮೃತ ಕನ್ಹಯ್ಯಾಲಾಲ್ ಅವರ ಪುತ್ರ ಯಶ್ ಈಟಿವಿ ಭಾರತ್ ಜೊತೆ ಮಾತನಾಡಿ, ನನ್ನ ತಂದೆಯ ಕೊಲೆಯಲ್ಲಿ ಪಾಕಿಸ್ತಾನದ ಕೈವಾಡವಿದೆ. ಎಲ್ಲ ಆರೋಪಿಗಳಿಗೆ ಗಲ್ಲ ಶಿಕ್ಷೆಯಾಗಬೇಕು. ದೇಶ ಇದಕ್ಕಿಂತಲೂ ಮೊದಲು ಹಲವಾರು ಭಯೋತ್ಪಾದನೆಗಳನ್ನು ಕಂಡಿದೆ. ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕು ಎಂದು ಆಗ್ರಹಿಸಿದರು.
ಓದಿ:ಚೀನಾದಿಂದ ಬರುವವರಿಗೆ ಆರ್ಟಿಪಿಸಿಆರ್, ಪಾಸಿಟಿವ್ ಬಂದರೆ ಕ್ವಾರಂಟೈನ್: ಕೇಂದ್ರ ಸರ್ಕಾರದ ಸ್ಟ್ರಿಕ್ಟ್ ಆರ್ಡರ್!