ನವದೆಹಲಿ: ಹೊಸ ಡೇಟಾ ಪ್ರೊಟೆಕ್ಷನ್ ಬಿಲ್ (ದತ್ತಾಂಶ ಸಂರಕ್ಷಣಾ ಮಸೂದೆ) ಸಿದ್ಧವಾಗಿದ್ದು, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠಕ್ಕೆ ಅಟಾರ್ನಿ ಜನರಲ್ ಆರ್. ವೆಂಕಟ್ರಮಣಿ ಈ ಮಾಹಿತಿ ನೀಡಿದ್ದಾರೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನು ಕೂಡ ಒಳಗೊಂಡ ಪೀಠವು ಸರ್ಕಾರ ನೀಡಿದ ಮಾಹಿತಿಯನ್ನು ಗಮನಿಸಿತು. ನ್ಯಾಯಮೂರ್ತಿ ಜೋಸೆಫ್ ಅವರು ಜೂನ್ 16 ರಂದು ನಿವೃತ್ತರಾಗಲಿದ್ದು, ಪ್ರಕರಣದ ವಿಚಾರಣೆಗಾಗಿ ಹೊಸ ಪೀಠ ರಚಿಸಬೇಕಾಗಿದೆ. ಹೀಗಾಗಿ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಇರಿಸುವಂತೆ ಪೀಠ ಸೂಚಿಸಿತು.
ಆಗಸ್ಟ್ 2023 ರ ಮೊದಲ ವಾರದಲ್ಲಿ ಪ್ರಕರಣದ ವಿಚಾರಣೆಯನ್ನು ನಿಗದಿ ಮಾಡಲಾಗಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ನ್ಯಾಯಾಲಯವು ನ್ಯಾಯಾಲಯದ ವಿಚಾರಣೆಗಳನ್ನು ಶಾಸಕಾಂಗ ಪ್ರಕ್ರಿಯೆಗೆ ಲಿಂಕ್ ಮಾಡಬಾರದು ಎಂದು ಮನವಿ ಮಾಡಿದರು. ಶಾಸಕಾಂಗ ಪ್ರಕ್ರಿಯೆಯು ಸಂಕೀರ್ಣವಾಗಿದೆ ಮತ್ತು ಅದನ್ನು ವಿಷಯವನ್ನು ಮತ್ತೆ ಕೆಲವು ಸಮಿತಿಗಳಿಗೆ ನೀಡಬಹುದು ಎಂದು ಅವರು ಹೇಳಿದರು.
ವಾಟ್ಸ್ಆ್ಯಪ್ ಮತ್ತು ಅದರ ಒಡೆತನ ಹೊಂದಿರುವ ಕಂಪನಿ ಫೇಸ್ಬುಕ್, ಬಳಕೆದಾರರು ಹಂಚಿಕೊಂಡ ಕರೆಗಳು, ಚಿತ್ರಗಳು, ವೀಡಿಯೊಗಳು ಮತ್ತು ದಾಖಲೆಗಳನ್ನು ಎರಡೂ ಕಂಪನಿಗಳ ಮಧ್ಯೆ ಪರಸ್ಪರ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿರುವುದು ತಮ್ಮ ಖಾಸಗಿತನ ಹಾಗೂ ಗೌಪ್ಯತೆಗೆ ಭಂಗ ಉಂಟು ಮಾಡುತ್ತದೆ ಎಂದು ಆರೋಪಿಸಿ ಕರ್ಮಣ್ಯಾ ಸಿಂಗ್ ಸರೀನ್ ಮತ್ತು ಶ್ರೇಯಾ ಸೇಠಿ ಎಂಬ ಇಬ್ಬರು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ಮೇಲಿನ ಬೆಳವಣಿಗೆಗಳು ನಡೆದಿವೆ.