ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ತುಫೈಲ್ ಅಹ್ಮದ್ ಎಂಬ ಬುಡಕಟ್ಟು ಹುಡುಗ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಯಲ್ಲಿ ತೇರ್ಗಡೆಯಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಈ ಮೂಲಕ ಯಶಸ್ಸಿನ ಪತಾಕೆ ಹಾರಿಸಿ ಕುಟುಂಬ ಹಾಗೂ ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾನೆ. ವಿಶೇಷವೆಂದರೆ ತುಫೈಲ್ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಶ್ರೀನಗರದ ಮೊದಲ ಬುಡಕಟ್ಟು ಯುವಕ.
ತುಫೈಲ್ ಮಿಷನ್ ಸ್ಕೂಲ್ ನ್ಯೂ ಥೀದ್ ಹರ್ವಾನ್ನಲ್ಲಿ ತಮ್ಮ 8ನೇ ತರಗತಿ ಹಾಗೂ 12 ನೇ ತರಗತಿಯನ್ನು ಶಾಲಿಮಾರ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಗಿಸಿದ್ದಾರೆ.
ಕಿಲೋಮೀಟರ್ ದೂರ ನಡೆದು ಶಾಲೆಗೆ ಹೋಗುತ್ತಿದ್ದರು:ಓದುವ ವಯಸ್ಸಿನಲ್ಲಿ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದ ಅವರು, ಇಂಟರ್ನೆಟ್ಗಾಗಿ ಮತ್ತು ಶಾಲೆಗೆ ಹೋಗಲು ಹಲವಾರು ಕಿಲೋಮೀಟರ್‌ಗಳನ್ನು ನಡೆಯಬೇಕಾಗಿತ್ತು ಎಂದು ತಾವು ಅನುಭವಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾನೆ.
ಶ್ರೀನಗರದವರೆಗೆ ನಡೆದು ಹೋಗುತ್ತಿದ್ದ ಅಹ್ಮದ್:ತುಫೈಲ್ ಅಹ್ಮದ್ ಅವರು ಅಧ್ಯಯನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಶ್ರೀನಗರದವರೆಗೆ ನಡೆದು ಹೋಗಿ ಇಂಟರ್‌ನೆಟ್ ಬಳಕೆ ಮಾಡಿಕೊಳ್ಳುತ್ತಿದ್ದೆ ಎಂಬ ವಿಚಾರವನ್ನು ಈ ವೇಳೆ ಬಾಯ್ಬಿಟ್ಟಿದ್ದಾರೆ.