ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಭೋಪಾಲ್ ಪ್ರವಾಸದಲ್ಲಿದ್ದ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ದೃಢಪಟ್ಟಿದೆ. ಇದ್ದಕ್ಕಿದ್ದಂತೆ ಅವರು ಭೋಪಾಲ್ನಿಂದ ದೆಹಲಿಗೆ ತೆರಳಿದ್ದಾರೆ.
ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ಭೋಪಾಲ್‌ಗೆ ಅಡ್ಮಿರಲ್ ಆರ್.ಹರಿಕುಮಾರ್ ಆಗಮಿಸಿದ್ದರು. ಈ ಸಮಾವೇಶಕ್ಕೆ ಆಗಮಿಸಿದ್ದ ಸುಮಾರು 1300 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆ ನಡೆಸಲಾಯಿತು. ನೌಕಾಪಡೆಯ ಮುಖ್ಯಸ್ಥರು ಸೇರಿದಂತೆ 22 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೋವಿಡ್ ಸೋಂಕು ಪತ್ತೆಯಾದ ತಕ್ಷಣವೇ ಅಡ್ಮಿರಲ್ ಹರಿಕುಮಾರ್ ಭೋಪಾಲ್ನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು. ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸಮ್ಮೇಳನ ಹಿನ್ನೆಲೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತೀಯ ಸೇನೆಯಿಂದ ಆಸ್ಪತ್ರೆಗಳಲ್ಲಿ ಹಲವಾರು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. 14 ವೈದ್ಯರ ತಂಡವನ್ನು ಸನ್ನದ್ಧಗೊಳಿಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಭೋಪಾಲ್‌ನ ಕುಶಾಬೌ ಠಾಕ್ರೆ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನ ನಡೆಯುತ್ತಿದೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥರು (ಸಿಡಿಎಸ್) ಮತ್ತು ಭೂ, ವಾಯು, ನೌಕಾಪಡೆಯ ಮುಖ್ಯಸ್ಥರು ಭಾಗವಹಿಸಿದ್ದರು. ಸಮ್ಮೇಳನವು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಂಡ ನಂತರ ಪ್ರಧಾನಿ ಮೋದಿ ಅವರು ರಾಣಿ ಕಮಲಾಪತಿ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ದೇಶದ 11ನೇ ಮತ್ತು ಮಧ್ಯಪ್ರದೇಶದ ಮೊದಲ ವಂದೇ ಭಾರತ್ ಏಕ್ಸ್ಪ್ರೆಸ್ ರೈಲಿಗೆ ಮೋದಿ ಹಸಿರು ನಿಶಾನೆ ತೋರಿದರು.
ಇದನ್ನೂ ಓದಿ:ವಿಜ್ಞಾನಿಗಳಿಂದ ಕೃತಕ ಮೂತ್ರಪಿಂಡದ ವಿನ್ಯಾಸ; ಹೇಗಿದೆ ಇದರ ಕಾರ್ಯ ವೈಖರಿ?