ಚಂಡೀಗಢ (ಪಂಜಾಬ್): ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್ ಸರ್ಕಾರವು ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.
ಪಂಜಾಬ್ ಸರ್ಕಾರದ ವಿರುದ್ಧ ಸರಣಿ ಟ್ವೀಟ್ಗಳನ್ನು ಮಾಡಿರುವ ಸಿಧು, ರೈತರ ಸಮಸ್ಯೆ, ವಿದ್ಯುತ್ ಕೊರತೆ ಮತ್ತು ಕನಿಷ್ಠ ಬೆಂಬಲ ಬೆಲೆ ವಿಷಯವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿ ಕ್ವಿಂಟಾಲ್ ಗೋಧಿಗೆ ಕನಿಷ್ಠ 400 ರೂ. ಪರಿಹಾರ ಘೋಷಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ವರ್ಷ ಬಿಸಿಲಿನ ವಾತಾವರಣದಿಂದಾಗಿ ಗೋಧಿ ಉತ್ಪಾದನೆಯು ಶೇ.30ರಿಂದ 50 ರಷ್ಟು ಕಡಿಮೆಯಾಗಿದೆ. ಈ ನಡುವೆ ಜಾಗತಿಕವಾಗಿ ಗೋಧಿಯ ಬೆಲೆ 3,500 ರೂ.ಗಳಾಗಿದ್ದು, ಕಳೆದ ವರ್ಷಕ್ಕಿಂತ 1,500ರೂ. ಅಧಿಕವಾಗಿದೆ. ಆದರೆ, ಇದರ ಲಾಭ ಗೋಧಿ ಬೆಳೆದ ರೈತರಿಗೆ ಸಿಗುತ್ತಿಲ್ಲ. ಬಡ ರೈತರ ವೆಚ್ಚದಲ್ಲಿ ಸರ್ಕಾರವೇಕೆ ಎಲ್ಲ ಸವಲತ್ತುಗಳನ್ನು ತೆಗೆದುಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರೈತರಿಗೆ ಬಂಪರ್: ಪ್ರತಿ ಎಕರೆಗೆ 1500 ರೂ. ಸಬ್ಸಿಡಿ ನೀಡಲು ಭಗವಂತ್ ಮಾನ್ ತೀರ್ಮಾನ!
ಅಲ್ಲದೇ, ಜೂನ್ 10ರಿಂದಲೇ ರೈತರಿಗೆ ಭತ್ತ ನಾಟಿ ಮಾಡಲು ಸರ್ಕಾರ ಅವಕಾಶ ನೀಡಬೇಕು. ತಡವಾದವರೆ ಹೆಚ್ಚಿನ ತೇವಾಂಶದಿಂದ ಬೆಲೆ ಕಡಿಮೆಯಾಗುತ್ತದೆ. ವಿದ್ಯುತ್ ಉಳಿತಾಯಕ್ಕಾಗಿ ಸರ್ಕಾರ ಹೀಗೆ ಮಾಡುತ್ತಿದೆಯೇ? ರೈತರೇ ಯಾಕೆ ಸದಾ ಸಂಕಷ್ಟಕ್ಕೆ ಒಳಗಾಗಬೇಕು?. ಸರ್ಕಾರ ನಿಜವಾಗಿಯೂ ಗಂಭೀರವಾಗಿದ್ದರೆ, ಬಾಸ್ಮತಿ ಅಕ್ಕಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಏಕೆ ಘೋಷಿಸುತ್ತಿಲ್ಲ. ಜೊತೆಗೆ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕು. ಇಲ್ಲವಾದಲ್ಲಿ ರೈತರ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದ್ದಾರೆ.
ಯಾವುದೇ ನೀತಿಯಿಲ್ಲದೆ ಬಜೆಟ್ನಿಂದ ರೈತರನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ರೈತರು ನಮ್ಮ ಜನಸಂಖ್ಯೆಯ ಶೇ.60ರಷ್ಟಿದ್ದಾರೆ. ಪಂಜಾಬ್‌ನ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ರೈತರ ಮುಂದೆ ಯಾರೂ ಗೆದ್ದಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸಿದರೆ ಶೇ.70ಕ್ಕೂ ಹೆಚ್ಚು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ ಎಂದು ಸಿಧು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕಟ್ಟೋಗಿದೆ. ಹಾಗೆ ಕಾನೂನು ಮತ್ತು ಸುವ್ಯವಸ್ಥೆ ಸಹ ಕುಸಿದು ಹೋಗಿದೆ. ಪಂಜಾಬ್ ಸರ್ಕಾರವು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯುತ್ ಸಮಸ್ಯೆ ಇದ್ದರೆ, ರೈತರಿಗೆ ಸರಿಯಾಗಿ ತಿಳಿಸಿ ಅವರೊಂದಿಗೆ ಪ್ರಾಮಾಣಿಕವಾಗಿರಿ. ಯಾವುದೇ ಪರಿಹಾರಕ್ಕಾಗಿ ರೈತರು ಮತ್ತೆ ದೆಹಲಿಗೆ ಹೋಗುವಂತೆ ಆಗಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಡೆಲ್ಲಿ ಲೆಪ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ರಾಜೀನಾಮೆ