ಮುಂಬೈ: ಸಾಕ್ಷ್ಯಚಿತ್ರವನ್ನು ನಿರ್ಮಿಸುವುದು ಒಂದು ಆಸಕ್ತಿದಾಯಕ ಕಲೆ. ಆದರೆ, ವಿವಾದಾತ್ಮಕ ದೇವಮಾನವರೊಬ್ಬರ ಮೇಲೆ ಡಾಕ್ಯುಮೆಂಟ್-ಸರಣಿಯನ್ನು ಮಾಡಲು ಹೊರಟಾಗ ಬದ್ಧತೆ ಮತ್ತು ಸಂಪೂರ್ಣ ಇಚ್ಛೆ ಅಗತ್ಯ. ಅವರ ಅಪರಾಧಗಳನ್ನು ಚಿತ್ರಿಸಲು ಮುಂದಾದಾಗ ಸ್ವಯಂಪ್ರೇರಿತವಾಗಿ ಬೆದರಿಸುವ ಕೆಲಸವಾಗುತ್ತದೆ ಎಂದು ಚಲನಚಿತ್ರ ನಿರ್ಮಾಪಕ, ಪತ್ರಕರ್ತ ನಮನ್ ಸಾರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಮೈ ಡಾಟರ್ ಜಾಯಿನ್ಡ್ ಎ ಕಲ್ಟ್' ಹೆಸರಿನ ನಿತ್ಯಾನಂದ ಕುರಿತಾದ ಡಾಕ್ಯುಮೆಂಟರಿಯೊಂದು ಡಿಸ್ಕವರಿ ಪ್ಲಸ್ ಒಟಿಟಿಯಲ್ಲಿ ಜೂನ್ 2ರಿಂದ ಪ್ರಸಾರವಾಗುತ್ತಿದೆ. ನಿತ್ಯಾನಂದ ಹಾಗೂ ಆತನ ಆಶ್ರಮದ ಬಗ್ಗೆ ಮಾಜಿ ಭಕ್ತರು ಬಿಚ್ಚಿಟ್ಟ ಹಲವು ಸಂಗತಿಗಳನ್ನು ದಾಖಲಿಸಿರುವ ಎಕ್ಸ್‌ಕ್ಲೂಸಿವ್ ಸಾಕ್ಷ್ಯಚಿತ್ರ ಸರಣಿ ಇದಾಗಿದ್ದು, ಹಿಂದಿ, ತಮಿಳು, ತೆಲುಗು, ಇಂಗ್ಲಿಷ್, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ.
ಮೂರು ಸಂಚಿಕೆಗಳಲ್ಲಿ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಜೀವನ ಪ್ರಸಾರವಾಗಲಿದ್ದು, ಈ ವೇಳೆ ಭಕ್ತರು ಹಾಗೂ ಆಶ್ರಮಕ್ಕೆ ಬರುವವರಿಗೆ ಯಾವ ರೀತಿಯಾಗಿ ಆಮಿಷವೊಡ್ಡಿದ್ದರು ಎಂಬ ವಿಷಯ ಸಹ ಇದೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಅನೇಕ ಭಕ್ತರು ಮಾತನಾಡಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಖುದ್ದಾಗಿ ಅನೇಕರ ಸಂದರ್ಶನ ಮಾಡಲಾಗಿದ್ದು, ತಲೆಮರೆಸಿಕೊಂಡಿದ್ದ ನಿತ್ಯಾನಂದರ ಪತ್ತೆ ಹಚ್ಚಿರುವ ವಿಷಯ ಸಹ ಇದರೊಳಗೆ ಇದೆ.