ಜಬಲ್‌ಪುರ (ಮಧ್ಯಪ್ರದೇಶ): ಅತ್ಯಂತ ಕಡಿಮೆ ವೆಚ್ಚದಲ್ಲಿ ಜನರಿಗೆ ಚಿಕಿತ್ಸೆ ನೀಡುವ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ವೈದ್ಯ ಡಾ. ಎಂ.ಸಿ.ದಾವರ್ ಅವರಿಗೆ ಕೇಂದ್ರ ಸರ್ಕಾರವು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 77 ವರ್ಷದ ದಾವರ್ ಅವರು, ಈ ಹಿಂದೆ ಜನರಿಗೆ ಕೇವಲ 2 ರೂಪಾಯಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದರು. ಪ್ರಸ್ತುತ ಅವರು ಚಿಕಿತ್ಸಾ ಶುಲ್ಕವಾಗಿ 20 ರೂಪಾಯಿ ಮಾತ್ರ ಪಡೆಯುತ್ತಿದ್ದಾರೆ.
74ನೇ ಗಣರಾಜ್ಯೋತ್ಸವದ ನಿಮಿತ್ತ ಬುಧವಾರ ಸಂಜೆ 91 ಜನ ಸಾಧಕರಿಗೆ ಪದ್ಮಶ್ರೀ ಪುರಸ್ಕೃತರ ಪ್ರಶಸ್ತಿಯ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಜಬಲ್‌ಪುರದ 20 ರೂಪಾಯಿ ವೈದ್ಯ ಡಾ.ಎಂ.ಸಿ.ದಾವರ್ ಸಹ ಒಬ್ಬರಾಗಿದ್ದಾರೆ. ಇವರು 1946ರ ಜನವರಿ 16ರಂದು ಆಗಿನ ಪಾಕಿಸ್ತಾನದ ಪಂಜಾಬ್‌ನಲ್ಲಿ ಜನಿಸಿದ್ದರು. ದೇಶ ವಿಭಜನೆಯ ನಂತರ ಅವರು ಭಾರತಕ್ಕೆ ಸ್ಥಳಾಂತರಗೊಂಡರು. 1967ರಲ್ಲಿ ಜಬಲ್‌ಪುರದಲ್ಲಿ ದಾವರ್ ತಮ್ಮ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಪದವಿಯಲ್ಲಿ ಪೂರೈಸಿದ್ದಾರೆ.
ಭಾರತೀಯ ಸೇನೆಯಲ್ಲಿ ಒಂದು ವರ್ಷ ಸೇವೆ: ಭಾರತೀಯ ಸೇನೆಯಲ್ಲೂ ಡಾ.ಎಂ.ಸಿ.ದಾವರ್ ಸೇವೆ ಸಲ್ಲಿಸಿದ್ದಾರೆ. 1971ರಲ್ಲಿ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಸುಮಾರು ಒಂದು ವರ್ಷ ಕಾಲ ಸೇನೆಯಲ್ಲಿ ದುಡಿದಿರುವ ಇವರು, ಇದರ ನಂತರ 1972ರಿಂದ ಜಬಲ್‌ಪುರದ ಜನರಿಗೆ ತುಂಬಾ ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿದ ಡಾ. ದಾವರ್, ಕಠಿಣ ಪರಿಶ್ರಮವು ಕೆಲವೊಮ್ಮೆ ತಡವಾದರೂ ಸಹ ಫಲ ನೀಡುತ್ತದೆ. ಜನರ ಆಶೀರ್ವಾದದಿಂದ ನನಗೆ ಈ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು. ಇದೇ ವೇಳೆ, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡಿದ ಅವರು, ಕಡಿಮೆ ಚಿಕಿತ್ಸೆ ಶುಲ್ಕ ವಿಧಿಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ, ಈ ಬಗ್ಗೆ ಯಾವುದೇ ತಕರಾರು ನಮ್ಮಲ್ಲಿರಲಿಲ್ಲ. ನಮ್ಮ ಏಕೈಕ ಗುರಿ ಜನರ ಸೇವೆಯಾಗಿದ್ದರಿಂದ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿಲ್ಲ ಮತ್ತು ಶುಲ್ಕವನ್ನು ಹೆಚ್ಚಿಸಿಲ್ಲ ಎಂದು ತಿಳಿಸಿದರು.