ಕೊಲ್ಲಂ (ಕೇರಳ): ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರಿ ದುರಂತ ನಡೆದಿದೆ. ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಲ್ಲಂ ಜಿಲ್ಲೆಯ ಪುನಲೂರು ಮೂಲದ ರಮ್ಯಾ ರಾಜ್ (30) ಎಂಬುವವರೇ ಮಕ್ಕಳ ಸಮೇತ ಸಾವಿಗೆ ಶರಣಾದ ಮಹಿಳೆ.
ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಪುನಲೂರು ರಬ್ಬರ್ ಪಾರ್ಕ್ ಬಳಿ ಈ ದುರ್ಘಟನೆ ನಡೆದಿದೆ. ರಮ್ಯಾ ತನ್ನ 5 ವರ್ಷದ ಮಗಳು ಸರಯೂ ಮತ್ತು 3 ವರ್ಷದ ಮಗ ಸೌರಭ್ನನ್ನು ದೇಹಕ್ಕೆ ಸೀರೆಯಿಂದ ಕಟ್ಟಿಕೊಂಡು ಇಲ್ಲಿನ ಕಲ್ಲಡ ನದಿಗೆ ಹಾರಿದ್ದಾರೆ. ಇದರಿಂದ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಈ ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರಮ್ಯಾ ಸೇರಿ ಮಕ್ಕಳನ್ನು ನದಿಯಿಂದ ದಡಕ್ಕೆ ತಂದಿದ್ದಾರೆ. ಆದರೂ, ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಮತ್ತೊಂದೆಡೆ, ಮಕ್ಕಳ ಸಮೇತವಾಗಿ ರಮ್ಯಾ ಆತ್ಮಹತ್ಯೆಗೆ ಮಾಡಿಕೊಂಡಿರುವುದಕ್ಕೆ ಕಾರಣ ಏನು ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸದ್ಯದ ಮಾಹಿತಿ ಪ್ರಕಾರ, ಕೌಟುಂಬಿಕ ಸಮಸ್ಯೆಯಿಂದ ಈ ಕನಿಷ್ಠ ನಿರ್ಧಾರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.
ನದಿಯಿಂದ ಹೊರ ತೆಗೆದ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುನಲೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆ ಬಗ್ಗೆ ಪುನಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಮೃತ ರಮ್ಯಾ ಪತಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.