ಭರತಪುರ(ರಾಜಸ್ಥಾನ) : ಏಳು ವರ್ಷಗಳ ಹಿಂದೆ ಜಿಲ್ಲೆಯ ಉಚ್ಚೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಶೀಲದ ಬಗ್ಗೆ ಶಂಕಿಸಿ ಅಪ್ರಾಪ್ತ ಬಾಲಕಿಯನ್ನು ಜೀವಂತ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಕೆಯ ತಾಯಿ ಹಾಗೂ ಅಜ್ಜಿಗೆ ಶಿಕ್ಷೆ ವಿಧಿಸಲಾಗಿದೆ.
ನಿರ್ದಯಿ ತಾಯಿ ಮತ್ತು ಅಜ್ಜಿ ತಮ್ಮ ಅಪ್ರಾಪ್ತ ಮಗಳನ್ನು ಜೀವಂತ ಸುಟ್ಟು ಹಾಕಿದ್ದರು. ಪ್ರಕರಣ ಹಿನ್ನೆಲೆ ವಿಚಾರಣೆ ನಡೆಸಲಾಗಿ ಪೋಕ್ಸೋ ನ್ಯಾಯಾಲಯ ಸಾಕ್ಷಿಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಈ ಶಿಕ್ಷೆ ಪ್ರಕಟಿಸುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದ ತಾಯಿ ಹಾಗೂ ಅಜ್ಜಿ ತೀವ್ರ ಅಳಲು ತೋಡಿಕೊಂಡಿದ್ದಾರೆ. ಪೋಕ್ಸೊ ನ್ಯಾಯಾಲಯದಲ್ಲಿ ಜುಲೈ 8, 2015 ರಂದು ಈ ಸಂಬಂಧ ದೂರು ದಾಖಲಾಗಿತ್ತು.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?: ಆರೋಪಿ ಜಗ್ಗೋ ಎಂಬಾತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಇದಾದ ಬಳಿಕ ಅಪ್ರಾಪ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲಾಗಿತ್ತು. ಆದರೆ, ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಸತ್ಯಾಂಶ ಹೊರಬಿದ್ದಿದೆ. ಇಡೀ ಪ್ರಕರಣದಲ್ಲಿ ಅಪ್ರಾಪ್ತೆಯ ತಾಯಿ ಮತ್ತು ಅಜ್ಜಿ ತಪ್ಪಿತಸ್ಥರೆಂದು ಸಾಬೀತಾಯಿತು.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ
ಅಪ್ರಾಪ್ತ ಬಾಲಕಿಯ ತಾಯಿ ಹಾಗೂ ಅಜ್ಜಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಇಂದು ಇಡೀ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ಕೋರ್ಟ್ ನಂ.2ರ ವಿಶೇಷ ನ್ಯಾಯಾಧೀಶ ಅಖಿಲೇಶ್ ಕುಮಾರ್, ಮೃತಳ ತಾಯಿ ನನ್ಹಾ ಮತ್ತು ಅಜ್ಜಿ ರಾಮೋಲಿ ಅವರನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಜೊತೆಗೆ ದಂಡವನ್ನೂ ವಿಧಿಸಿದ್ದಾರೆ. ಈ ವೇಳೆ ಜಗ್ಗೋ ಎಂಬ ವ್ಯಕ್ತಿಯನ್ನು ದೋಷಮುಕ್ತಗೊಳಿಸಲಾಗಿದೆ.