ನವದೆಹಲಿ :2022ರ ಕ್ಯಾಲೆಂಡರ್ ವರ್ಷಕ್ಕಾಗಿ ಇಂಡಿಯಾ ಅಟೊಮೊಬೈಲ್ ಇ-ಕಾಮರ್ಸ್ ರಿಪೋರ್ಟ್ ಅನ್ನು ಡ್ರೂಮ್ ಬಿಡುಗಡೆ ಮಾಡಿದೆ. ಭಾರತದ ಮುಂಚೂಣಿಯ ಅಟೊಮೊಬೈಲ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಡ್ರೂಮ್ ಮೇಲೆ ಮಾರಾಟಕ್ಕೆ 1.4 ಮಿಲಿಯನ್ಗೂ ಅಧಿಕ ವಾಹನಗಳು ಲಿಸ್ಟ್ ಆಗಿವೆ. ಡ್ರೂಮ್ ವರದಿಯ ಪ್ರಕಾರ ಕಾರುಗಳಲ್ಲಿ SUV ವಲಯವೇ ಪಾರಮ್ಯ ಸಾಧಿಸಿದ್ದು, ಇದರಲ್ಲಿ ಹ್ಯುಂಡೈ ಕ್ರೆಟಾ ಅತ್ಯಂತ ಜನಪ್ರಿಯ ಕಾರ್ ಆಗಿ ಹೊರಹೊಮ್ಮಿದೆ. ಇದರ ನಂತರದ ಸ್ಥಾನದಲ್ಲಿ ಕಿಯಾ ಸೆಲ್ಟೋಸ್ ಇದೆ. ಈ ಎರಡರ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಟೊಯೊಟಾ ಫಾರ್ಚುನರ್ ಇವೆ. ಇನ್ನು ದ್ವಿಚಕ್ರ ವಾಹನಗಳ ವಲಯದಲ್ಲಿ ಬಜಾಜ್ ಪಲ್ಸರ್ ಅಗ್ರ ಆದ್ಯತೆಯಾಗಿ ಹೊರಹೊಮ್ಮಿದೆ. ಇದರ ನಂತರ ಸ್ಥಾನಗಳಲ್ಲಿ ಕ್ರಮವಾಗಿ ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಪಲ್ಸರ್ ಎನ್‌ಎಸ್, ಟಿವಿಎಸ್ ಅಪಾಚೆ ಆರ್‌ಟಿಆರ್ ಮತ್ತು ಹೋಂಡಾ ಸಿಬಿ ಶೈನ್ ಇವೆ.
ಐಷಾರಾಮಿ ವಾಹನಗಳ ವಿಭಾಗದಲ್ಲಿ, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಹೆಚ್ಚು ಆದ್ಯತೆಯ ಐಷಾರಾಮಿ ಕಾರಾಗಿದೆ. ಜೀಪ್ ಕಂಪಾಸ್, ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಮತ್ತು ಬಿಎಂಡಬ್ಲ್ಯು 5 ಸಿರೀಸ್ ನಂತರದ ಸ್ಥಾನಗಳಲ್ಲಿವೆ. 2-ವೀಲರ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಹಾಟ್ ಫೇವರಿಟ್ ಆಗಿದೆ. ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಕವಾಸಕಿ ನಿಂಜಾ ZX-10R ನಂತರದ ಸ್ಥಾನಗಳಲ್ಲಿವೆ.
ಕ್ಯಾಲೆಂಡರ್ ವರ್ಷ 2015 ರಿಂದ 2022 ರ ಅವಧಿಯಲ್ಲಿ ಅಟೊಮ್ಯಾಟಿಕ್ ಟ್ರಾನ್ಸಮಿಷನ್ ವಾಹನಗಳ ಬೇಡಿಕೆ ಏರುಗತಿಯಲ್ಲಿದೆ. ಈ ಅವಧಿಯಲ್ಲಿ ಇವುಗಳ ಬೇಡಿಕೆ ಶೇ 23 ರಿಂದ ಶೇ 33 ಕ್ಕೆ ಹೆಚ್ಚಾಗಿದೆ. ಚಾಲನೆಗೆ ಅನುಕೂಲ ಮತ್ತು ಹೆಚ್ಚಿನ ಇಂಧನ ದಕ್ಷತೆಯ ದೃಷ್ಟಿಯಿಂದ ಇವು ಜನಪ್ರಿಯತೆ ಗಳಿಸಿವೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದ ಬೆಳವಣಿಗೆಯು ಭಾರತದಲ್ಲಿನ ಒಟ್ಟು ವಾಹನ ಮಾರಾಟದಲ್ಲಿ ಶೇ 1 ರಷ್ಟಿದ್ದು ಸ್ಥಿರವಾಗಿದೆ. 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳ ಮೇಲೆ ನಿರ್ಬಂಧ ಹೇರುವ ವಾಹನ ಸ್ಕ್ರ್ಯಾಪೇಜ್ ನೀತಿಯ ಕಾರಣದಿಂದಾಗಿ ಡೀಸೆಲ್ ವಾಹನಗಳ ಪ್ರಮಾಣ 2021 ರಲ್ಲಿದ್ದ ಶೇ 60 ರಿಂದ 2022 ನಲ್ಲಿ ಶೇ 53 ಕ್ಕೆ ಕುಸಿದಿದೆ.