ನವದೆಹಲಿ: ಗುಜರಾತ್‌ನ ಮೋರ್ಬಿ ಸೇತುವೆ ಕುಸಿತ ದುರಂತದ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ.14 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ವಕೀಲ ವಿಶಾಲ್ ತಿವಾರಿ ಅವರು ತುರ್ತು ವಿಚಾರಣೆಗಾಗಿ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾ.ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು, ನೀವು ಬಹಳ ಫಾಸ್ಟ್. ನಿಮ್ಮ ಮನವಿ ಏನು ಎಂದು ಕೇಳಿದೆ.
ಈ ವೇಳೆ, 'ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆಗೆ ನಾನು ಕೋರುತ್ತಿದ್ದೇನೆ' ಎಂದು ವಕೀಲರು ಹೇಳಿದರು. ನಂತರ ಪೀಠವು ನವೆಂಬರ್ 14 ರಂದು ಪಿಐಎಲ್ ಅನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದೆ.
'ಸೇತುವೆ ಕುಸಿತ 134ಕ್ಕೂ ಹೆಚ್ಚು ಸಾವು ನೋವುಗಳಿಗೆ ಕಾರಣವಾಗಿದೆ. ಇದು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಕಳೆದ ಒಂದು ದಶಕದಿಂದ, ದುರುಪಯೋಗ, ಕರ್ತವ್ಯ ಲೋಪ, ನಿರ್ಲಕ್ಷ ನಿರ್ವಹಣೆ ಚಟುವಟಿಕೆಗಳಿಂದಾಗಿ ನಮ್ಮ ದೇಶದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಆದರೆ, ಅಪಾರ ಪ್ರಮಾಣದ ಸಾರ್ವಜನಿಕ ಸಾವುನೋವುಗಳನ್ನು ತಪ್ಪಿಸಬಹುದಾಗಿತ್ತು' ಎಂದು ಪಿಐಎಲ್‌ನಲ್ಲಿ ತಿವಾರಿ ಹೇಳಿದ್ದಾರೆ.