ಇಟಾನಗರ (ಅರುಣಾಚಲ ಪ್ರದೇಶ):ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆ ಮತ್ತು ಪಕ್ಕದ ಪ್ರದೇಶಗಳಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.
ಪಂಗಿನ್ ಮತ್ತು ಸಿಯಾಂಗ್ ಜಿಲ್ಲೆಯ ಇತರ ಹಲವು ಪ್ರದೇಶಗಳಲ್ಲಿ ಮಧ್ಯಮ ತೀವ್ರತೆಯ ಭೂಕಂಪನವು ಜನರಲ್ಲಿ ಸ್ವಲ್ಪ ಭಯ ಉಂಟುಮಾಡಿದೆ ಎಂದು ಎನ್‌ಸಿಎಸ್ ಹೇಳಿದೆ. ಭೂಕಂಪವು ಮೇಲ್ಮೈಯಿಂದ 10 ಕಿಮೀ ಆಳದಲ್ಲಿ ಸಂಭವಿಸಿದೆ. ಅರುಣಾಚಲ ಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರವು ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ತಿಳಿಸಿದೆ.
ಈಶಾನ್ಯ ಪ್ರದೇಶ ವಿಶ್ವದ 6ನೇ ಅತಿ ಹೆಚ್ಚು ಭೂಕಂಪನ ಪೀಡಿತ ಬೆಲ್ಟ್:ಪರ್ವತಮಯ ಈಶಾನ್ಯ ರಾಜ್ಯಗಳಲ್ಲಿ, ವಿಶೇಷವಾಗಿ ಅಸ್ಸೋಂ ಮಿಜೋರಾಂ ಮತ್ತು ಮಣಿಪುರದಲ್ಲಿ ನಡೆಯುತ್ತಿರುವ ಸತತ ಭೂಕಂಪಗಳು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದ್ದು, ಭೂಕಂಪದ ಹಿನ್ನೆಲೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಭೂಕಂಪಶಾಸ್ತ್ರಜ್ಞರು ಈಶಾನ್ಯ ಪ್ರದೇಶವನ್ನು ವಿಶ್ವದ ಆರನೇ ಅತಿ ಹೆಚ್ಚು ಭೂಕಂಪನ ಪೀಡಿತ ಬೆಲ್ಟ್ ಎಂದು ಪರಿಗಣಿಸುತ್ತಾರೆ.
ಇತ್ತೀಚೆಗೆ ಮಣಿಪುರ, ರಾಜಸ್ಥಾನದಲ್ಲಿ ಭೂಕಂಪನ:ರಾಜಸ್ಥಾನದ ಜೈಪುರದಲ್ಲಿ ಜುಲೈ 21ರಂದು ಬೆಳಗ್ಗೆ ಅರ್ಧಗಂಟೆ ಅವಧಿಯಲ್ಲಿ ಮೂರು ಬಾರಿ ಭೂಕಂಪನ ಆದ ಅನುಭವವಾಗಿತ್ತು. ಇಲ್ಲಿನ ಕೆಲವೆಡೆ ಭಯಗೊಂಡ ಜನರು, ಮನೆಯಿಂದ ಹೊರಗೆ ಓಡಿ ಬಂದಿದ್ದರು. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ, ಜುಲೈ 21ರಂದು ಮುಂಜಾನೆ 4:10ಕ್ಕೆ ಮೊದಲ ಬಾರಿ, 4:23ಕ್ಕೆ ಎರಡನೇ ಬಾರಿ, 4:25ಕ್ಕೆ ಮೂರನೇ ಬಾರಿ ಭೂಮಿ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 3.1, 3.4 ಹಾಗೂ 4.4 ತೀವ್ರತೆ ದಾಖಲಾಗಿತ್ತು.
ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲೂ ಜುಲೈ 21ರಂದು ಬೆಳಗ್ಗೆ ಭೂಮಿ ಕಂಪಿಸಿತ್ತು. ಉಖ್ರುಲ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಭೂಕಂಪನ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ಕೊಟ್ಟಿತ್ತು. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿತ್ತು. ಯಾವುದೇ ಹಾನಿ ಸಂಭವಿಸಿರಲಿಲ್ಲ. ಮೇ ತಿಂಗಳ ಅವಧಿಯಲ್ಲಿ ಉಖ್ರುಲ್‌ನಲ್ಲಿ ಭೂಮಿ ಕಂಪನದ ಅನುಭವವಾಗಿತ್ತು.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಜುಲೈ 21ರಂದು ಬೆಳಿಗ್ಗೆ 5.15ಕ್ಕೆ 3.5 ತೀವ್ರತೆಯ ಕಂಪನವಾಗಿತ್ತು. ಗುಡ್ಡಗಾಡು ಪ್ರದೇಶವಾದ ಉಖ್ರುಲ್ ಜಿಲ್ಲೆ ಮ್ಯಾನ್ಮಾರ್‌ನೊಂದಿಗೆ ಗಡಿ ಹಂಚಿಕೊಂಡಿದೆ. ಭೂಮೇಲ್ಮೈಯಿಂದ 20 ಕಿಮೀ ಆಳದಲ್ಲಿ ಈ ಘಟನೆ ನಡೆದಿತ್ತು. ಜನರು ಗಾಬರಿಯಾಗಿ ಮನೆಗಳಿಂದ ಹೊರಗೆ ಬಂದಿದ್ದರು.
ಇದನ್ನೂ ಓದಿ:ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ: ವಿಡಿಯೋ