ಕರ್ನಾಟಕ

karnataka

ETV Bharat / bharat

ಕಾರ್​ ಪಾರ್ಕಿಂಗ್​​ ವಿಚಾರಕ್ಕೆ ಗಲಾಟೆ: ನಾಲ್ವರ ಸಾವು

ಬಿಹಾರದ ಔರಂಗಬಾದ್​ನಲ್ಲಿ ಕಾರು ಪಾರ್ಕಿಂಗ್​ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಕಾರ್​ ಪಾರ್ಕಿಂಗ್​​ ವಿಚಾರಕ್ಕೆ ಗಲಾಟೆ
ಕಾರ್​ ಪಾರ್ಕಿಂಗ್​​ ವಿಚಾರಕ್ಕೆ ಗಲಾಟೆ

By ETV Bharat Karnataka Team

Published : Jan 15, 2024, 9:49 PM IST

ಔರಂಗಬಾದ್​ (ಬಿಹಾರ):ಕಾರು ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಇಲ್ಲಿಯ ನಬಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ತೆಟಾರಿಯಾ ಎಂಬಲ್ಲಿ ನಡೆದಿದೆ. ನಾಲ್ವರ ಪೈಕಿ ಓರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಉಳಿದ ಮೂವರು ಸ್ಥಳೀಯರ ಥಳಿತದಿಂದ ಸಾವನ್ನಪ್ಪಿದ್ದಾರೆ.

ಘಟನೆಯ ವಿವರ:ತೆಟಾರಿಯಾ ಎಂಬಲ್ಲಿ ಅಂಗಡಿಯೊಂದರ ಮುಂದೆ ಚಾಲಕ ಕಾರನ್ನು ಪಾರ್ಕಿಂಗ್​ ಮಾಡಿದ್ದ. ಅಂಗಡಿಯ ಮುಂಭಾಗ ನಿಲ್ಲಿಸಿದ ಕಾರಣ ಅಂಗಡಿಯ ಮಾಲೀಕ ತಕ್ಷಣ ಕಾರನ್ನು ಅಲ್ಲಿಂದ ತೆಗೆಯುವಂತೆ ಹೇಳಿದ್ದಾನೆ. ಇದೇ ವಿಚಾರವಾಗಿ ಅಂಗಡಿ ಮಾಲೀಕ ಮತ್ತು ಕಾರು ಚಾಲಕನ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ಘರ್ಷಣೆಯ ರೂಪ ಪಡೆದಿದೆ. ಈ ವೇಳೆ ಕಾರು ಚಾಲಕ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದಾನೆ.

ಆತ ಹಾರಿಸಿದ ಗುಂಡು ಮಾಲೀಕನಿಗೆ ತಾಗದೇ ಬದಲಾಗಿ ಪಕ್ಕದಲ್ಲಿ ನಿಂತಿದ್ದ ಮತ್ತೊಬ್ಬ ವ್ಯಕ್ತಿಗೆ ತಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕಾರು ಚಾಲಕ ಸೇರಿ ಕಾರಿನಲ್ಲಿದ್ದ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾಮಸ್ಥರ ದಾಳಿಯಿಂದ ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಒಬ್ಬ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಸದ್ಯ ಓರ್ವ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾರಿನಲ್ಲಿದ್ದ ಮೃತರನ್ನು ಜಾರ್ಖಂಡ್‌ನ ಪಲಾಮು ಜಿಲ್ಲೆಯ ಹೈದರ್‌ನಗರ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ನಾಲ್ವರು ಸಸಾರಾಮ್‌ನಲ್ಲಿರುವ ಶೇರ್ ಶಾ ಸೂರಿಯ ಸಮಾಧಿಗೆ ಭೇಟಿ ನೀಡಲು ಕಾರಿನಲ್ಲಿ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಬಿನಗರ ಠಾಣೆ ಪ್ರಭಾರಿ ಮನೋಜ್ ಕುಮಾರ್ ಪಾಂಡೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಉಪವಿಭಾಗೀಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಮಾನುಲ್ಲಾ ಖಾನ್, ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದೇವೆ. ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಪ್ರತಿಯೊಂದು ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮಹುವರಿ ಗ್ರಾಮದ ನಿವಾಸಿ ರಾಮ್ ಶರಣ್ ಚೌಹಾಣ್ ಎಂದು ಗುರುತಿಸಲಾಗಿದೆ.

ಸ್ಥಳೀಯರ ಥಳಿತದಿಂದ ಮೃತಪಟ್ಟವರನ್ನು ಹೈದರ್‌ನಗರ ನಿವಾಸಿ ಮೊಹಮ್ಮದ್​ ಅರ್ಮಾನ್, ಮೊಹಮ್ಮದ್ ಅಂಜಾರ್, ಮೊಹಮ್ಮದ್ ಮುಜಾಹಿರ್, ಮೊಹಮ್ಮದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಐಎಸ್‌ಐ ಶಂಕಿತ ಏಜೆಂಟ್​ ಅರೆಸ್ಟ್​

ABOUT THE AUTHOR

...view details