ಚೆನ್ನೈ (ತಮಿಳುನಾಡು) :ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್ ಸೇರಿದಂತೆ ಚಂದ್ರಯಾನ ಮತ್ತು ಸೌರಯಾನ ಯೋಜನೆಗಳಲ್ಲಿ ಭಾಗಿಯಾಗಿರುವ ತಮಿಳುನಾಡಿಗೆ ಸೇರಿದ 9 ವಿಜ್ಞಾನಿಗಳಿಗೆ ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರ ತಲಾ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಈ ವಿಜ್ಞಾನಿಗಳ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನೂ ಆರಂಭಿಸಲಾಗುವುದು ಎಂದೂ ಸರ್ಕಾರ ಹೇಳಿದೆ.
ಚೆನ್ನೈನಲ್ಲಿ ಇಂದು ನಡೆದ ಸಮಾರಂಭದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿದ ಸಿಎಂ ಸ್ಟಾಲಿನ್, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸಿದ ಭಾರತವು ಇಡೀ ಜಗತ್ತಿಗೆ ಮಾದರಿಯಾಗಿದೆ. ಈ ಸಾಧನೆಯಲ್ಲಿ ತಮಿಳುನಾಡಿನ ವಿಜ್ಞಾನಿಗಳ ಪಾತ್ರ ಅಗಾಧವಾಗಿದೆ. ಚಂದ್ರಯಾನ ಯೋಜನಾ ನಿರ್ದೇಶಕ ವೀರಮುತ್ತುವೆಲ್ ತಮಿಳುನಾಡಿನವರಾಗಿದ್ದಾರೆ. ನಮ್ಮೆಲ್ಲರಿಗೂ ಇದು ಹೆಮ್ಮೆಯ ವಿಚಾರ ಎಂದರು.
ವಿಜ್ಞಾನಿಗಳ ಹೆಸರಲ್ಲಿ ವಿದ್ಯಾರ್ಥಿವೇತನ:ಈ ಒಂಬತ್ತು ವಿಜ್ಞಾನಿಗಳ ಹೆಸರಿನಲ್ಲಿ ಒಂಬತ್ತು ವಿದ್ಯಾರ್ಥಿವೇತನವನ್ನು ಸ್ಥಾಪಿಸುವುದಾಗಿ ಸಿಎಂ ಸ್ಟಾಲಿನ್ ಪ್ರಕಟಿಸಿದರು. ಸ್ನಾತಕೋತ್ತರ ಪದವಿ ಓದುತ್ತಿರುವ ಒಂಬತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ. ಶಿಕ್ಷಣ, ಹಾಸ್ಟೆಲ್ ಶುಲ್ಕ ಮತ್ತು ಇತರ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ವಿಜ್ಞಾನಿಗಳ ಸಮಿತಿಯು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. ಈ ವಿದ್ಯಾರ್ಥಿವೇತನಕ್ಕಾಗಿ ಸರ್ಕಾರವು 10 ಕೋಟಿ ರೂಪಾಯಿ ನಿಧಿ ಮೀಸಲಿಡುತ್ತದೆ ಎಂದು ಸ್ಟಾಲಿನ್ ಹೇಳಿದರು.