ಕರ್ನಾಟಕ

karnataka

ETV Bharat / bharat

ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಮತಗಟ್ಟೆ ಅಧಿಕಾರಿ ಅಪಘಾತದಲ್ಲಿ ಸಾವು

ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ - ಮತಗಟ್ಟೆಗೆ ತೆರಳುತ್ತಿದ್ದ ವಾಹನ ಅಪಘಾತ - ಓರ್ವ ಮತಗಟ್ಟೆ ಅಧಿಕಾರಿ ಸಾವು, ಹಲವರಿಗೆ ಗಾಯ

meghalaya-polling-officer-dies-in-accident
ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಮತಗಟ್ಟೆ ಅಧಿಕಾರಿ ಅಪಘಾತದಲ್ಲಿ ಸಾವು

By

Published : Feb 26, 2023, 5:27 PM IST

ಶಿಲ್ಲಾಂಗ್ : ಮೇಘಾಲಯದ ವೆಸ್ಟ್​​ ಗರೋ ಹಿಲ್ಸ್ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಅಧಿಕಾರಿಯನ್ನು ಚೆಶಮ್​ ಚಿ ಮರಕ್​ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮುಖ್ಯ ಚುನಾವಣಾ ಅಧಿಕಾರಿ ಎಫ್ಆರ್ ಖಾರ್ಕೊಂಗೊರ್ ಮಾಹಿತಿ ನೀಡಿದ್ದಾರೆ.

ಮುಖ್ಯ ಚುನಾವಣಾ ಅಧಿಕಾರಿ ಪ್ರಕಾರ, ಶನಿವಾರ ರಾತ್ರಿ ವೆಸ್ಟ್​ ಗರೋ ಹಿಲ್ಸ್​ ಜಿಲ್ಲೆಯ ಜಂಗ್ರಪಾರದ ಎಲ್​ಪಿ ಶಾಲೆಯ ಮತಗಟ್ಟೆ ಅಧಿಕಾರಿಗಳನ್ನು ಹೊತ್ತು ಸಾಗುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಓರ್ವ ಮತಗಟ್ಟೆ ಅಧಿಕಾರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಇತರ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಗಾಯಗೊಂಡವರನ್ನು ಇಲ್ಲಿನ ಟೆಕ್ರಿಕಿಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡ ಚೆಶಮ್​ ಮತ್ತು ಇತರ ಅಧಿಕಾರಿಗಳನ್ನು ಗೋಲ್ಪಾರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದರಿಂದ ಚೆಶಮ್​ ಅವರು ಗುವಾಹಟಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದಿಂದ ಇವಿಎಂ ಯಂತ್ರಗಳನ್ನು ಸೆಕ್ಟರ್ ಮ್ಯಾಜಿಸ್ಟ್ರೇಟ್​ ಸಂಗ್ರಹಿಸಿದ್ದಾರೆ. ಬಳಿಕ ಇವಿಯಂ ಯಂತ್ರಗಳನ್ನು ಭದ್ರತಾ ಪಡೆಗಳೊಂದಿಗೆ ಸಂಬಂಧಪಟ್ಟ ಮತಗಟ್ಟೆಗಳಿಗೆ ಕೊಂಡೊಯ್ಯಲಾಗಿದೆ. ವೆಸ್ಟ್ ಗರೊ ಹಿಲ್ಸ್​ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಅಧಿಕಾರಿಯ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಮೃತರ ಕುಟುಂಬಕ್ಕೆ ಚುನಾವಣಾ ಇಲಾಖೆಯು ಸುಮಾರು 15 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ ಎಂದು ಇದೇ ವೇಳೆ ಖಾರ್ಕೊಂಗೊರ್ ತಿಳಿಸಿದ್ದಾರೆ.

ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ :ಮೇಘಾಲಯ ವಿಧಾನಸಭೆ ಚುನಾವಣೆಯ ಮತದಾನ ಫೆ.27ಕ್ಕೆ ನಡೆಯಲಿದೆ. ಶನಿವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಸೋಮವಾರ 59 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮಾರ್ಚ್​ 2ರಂದು ಮತ ಎಣಿಕೆ ನಡೆಯಲಿದೆ.

ಇನ್ನು, ರಾಜ್ಯಾದ್ಯಂತ ಒಟ್ಟು 3,419 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 640 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. 19,000 ಚುನಾವಣಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಚುನಾವಣಾ ಭದ್ರತೆಗಾಗಿ ಸಿಎಪಿಎಫ್‌ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಒಟ್ಟು 369 ಅಭ್ಯರ್ಥಿಗಳು ಕಣದಲ್ಲಿದ್ದು, 21.6 ಲಕ್ಷ ನೋಂದಾಯಿತ ಮತದಾರರಿದ್ದಾರೆ. ಚುನಾವಣಾ ಆಯೋಗ ಶಾಂತಿಯುತ ಮತದಾನಕ್ಕೆ ಸಿದ್ಧತೆ ನಡೆಸಿದೆ.

ಇದನ್ನೂ ಓದಿ :ವಿದೇಶಿ ವಿನಿಮಯ ಮೀಸಲು 5.681 ಶತಕೋಟಿ ಡಾಲರ್​ಗೆ ಇಳಿಕೆ: ಸತತ ಮೂರನೇ ವಾರ ಕುಸಿತ

ABOUT THE AUTHOR

...view details