ಮೇಘಾಲಯ:ರಾಜ್ಯದ ಜನರು ಕೋಳಿ, ಕುರಿ ಮತ್ತು ಮೀನು ಸೇವನೆಗಿಂತ ಹೆಚ್ಚಾಗಿ ಗೋಮಾಂಸವನ್ನು ಸೇವಿಸಿ ಎಂದು ಬಿಜೆಪಿ ಸಚಿವ ಸಾನ್ಬೋರ್ ಶುಲ್ಲೈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸ್ವಪಕ್ಷೀಯರೇ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ ವಾರವಷ್ಟೇ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶುಲ್ಲೈ, ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ತಿನ್ನಲು ಸ್ವತಂತ್ರರು ಎಂದು ಹೇಳಿದ್ದಾರೆ.
"ನಾನು ಜನರನ್ನು ಚಿಕನ್, ಮಟನ್ ಅಥವಾ ಮೀನಿಗಿಂತ ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರನ್ನು ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುವ ಮೂಲಕ ಬಿಜೆಪಿ ಗೋಹತ್ಯೆಯ ಮೇಲೆ ನಿಷೇಧ ಹೇರುತ್ತದೆ ಎಂಬ ಗ್ರಹಿಕೆಯನ್ನು ಹೋಗಲಾಡಿಸಲಾಗುತ್ತದೆ" ಎಂದು ಶುಕ್ರವಾರ ಹೇಳಿಕೆ ನೀಡಿದ್ದರು.
ಪಶು ಸಂಗೋಪನೆ ಮತ್ತು ಪಶುವೈದ್ಯ ಸಚಿವರಾಗಿರುವ ಶುಲ್ಲೈ ಅವರು, ನೆರೆಯ ರಾಜ್ಯ ಅಸ್ಸಾಂನಿಂದ ಸಾಗಾಟವಾಗುವ ಜಾನುವಾರುಗಳ ಮೇಲೆ ಗೋವುಗಳಿಗೆ ಸಂಬಂಧಿಸಿದ ನೂತನ ಕಾಯ್ದೆ ಪರಿಣಾಮ ಬೀರದಂತೆ ಹಿಮಂತ್ ಬಿಸ್ವಾ ಶರ್ಮಾ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದರು.