ಇಟಾವಾ (ಉತ್ತರಪ್ರದೇಶ) :ದೆಹಲಿಯಿಂದ ಉತ್ತರಪ್ರದೇಶದ ದರ್ಭಾಂಗಕ್ಕೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೋಗಿಯ ಕೆಳಗೆ ಅಳವಡಿಸಲಾಗಿದ್ದ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಮೂರು ಬೋಗಿಗಳು ಅಗ್ನಿಗೆ ಆಹುತಿಯಾಗಿವೆ. ಹಠಾತ್ ಸಂಭವಿಸಿದ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮಾಹಿತಿಯ ಪ್ರಕಾರ, ದರ್ಭಾಂಗ್ ಎಕ್ಸ್ಪ್ರೆಸ್ ಇಲ್ಲಿನ ಸರಾಯ್ ಭೂಪತ್ ರೈಲು ನಿಲ್ದಾಣದಿಂದ ಸಂಜೆ 6 ಗಂಟೆಗೆ ಸುಮಾರಿನಲ್ಲಿ ಹೊರಡುತ್ತಿದ್ದಾಗ ಎಸ್ 1 ಬೋಗಿಗೆ ಹಠಾತ್ ಬೆಂಕಿ ಹೊತ್ತಿಕೊಂಡಿದೆ. ರೈಲು ಚಲಿಸುತ್ತಿದ್ದಾಗಲೇ ನಡೆದ ಘಟನೆಯಿಂದ ಪ್ರಯಾಣಿಕರು ಆತಂಕಗೊಂಡರು. ತಕ್ಷಣವೇ ರೈಲು ನಿಲ್ಲಿಸಲಾಯಿತು. ಬೆಂಕಿ ಆವರಿಸಿದ್ದ ಬೋಗಿಯನ್ನು ಆವರಿಸಿಕೊಳ್ಳುವ ಮೊದಲೇ ಪ್ರಯಾಣಿಕರು ಇಳಿದು ಜೀವ ಉಳಿಸಿಕೊಂಡಿದ್ದಾರೆ.
ನಿಲ್ದಾಣದಿಂದ ಆಗಷ್ಟೇ ಹೊರಟಿದ್ದ ಕಾರಣ ರೈಲಿನ ವೇಗ 20ರಿಂದ 30 ಕಿ.ಮೀ.ಗಳಷ್ಟಿತ್ತು ಎಂದು ಹೇಳಲಾಗುತ್ತಿದೆ. ಬೋಗಿಯಲ್ಲಿ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಪ್ರಯಾಣಿಕರಿದ್ದರು. ಬೆಂಕಿ ವ್ಯಾಪಿಸಿ ಮೂರು ಬೋಗಿಗಳಿಗೆ ಆವರಿಸಿದೆ. ರೈಲಿನ ಎಸ್1 ಕೋಚ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಗಾಯಾಳುಗಳಿಗೆ ಚಿಕಿತ್ಸೆ:ಬೆಂಕಿ ಹೊತ್ತಿಕೊಂಡ ತಕ್ಷಣವೇ ಜನರು ರೈಲಿನಿಂದ ಇಳಿದರೂ ಇಬ್ಬರು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಛತ್ ಪೂಜೆ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬಿಹಾರಕ್ಕೆ ತೆರಳಿ ವಾಪಸ್ ಬರುತ್ತಿದ್ದರು. ಇದರಿಂದ ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಂಡ ಬೋಗಿಯ ಪಕ್ಕದ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಜನರು ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ರೈಲು ನಿಲ್ಲಿಸಿದ ಬಳಿಕ ಜನರು ಹೊರಬಂದಿದ್ದು, ನಿಲ್ದಾಣದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
6 ಗಂಟೆ ಹೊತ್ತಿ ಉರಿದ ಬೋಗಿಗಳು:ಮೂರು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 6 ಗಂಟೆ ಹೊತ್ತಿ ಉರಿದಿವೆ ಎಂದು ಸ್ಥಳೀಯರು ತಿಳಿಸಿದರು. ಅಪಘಾತ ಸಂಭವಿಸಿದ 1 ಗಂಟೆಯ ನಂತರ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿವೆ. ಅಷ್ಟರಲ್ಲಾಗಲೇ ಎಸ್ 1, 2 ಮತ್ತು 3 ಬೋಗಿಗಳಿಗೆ ಬೆಂಕಿಯಿಂದ ಸುಟ್ಟು ಕರಕಲಾಗಿವೆ.
ದುರಂತ ತಪ್ಪಿಸಿದ ಚಾಲಕ:ಚಾಮರಾಜನಗರದಿಂದ ಮೈಸೂರಿಗೆ ತೆರಳುತ್ತಿದ್ದ ರೈಲು ಅಪಘಾತಕ್ಕೀಡು ಮಾಡಲು ರೂಪಿಸಲಾಗಿದ್ದ ಸಂಚು ಲೋಕೋ ಪೈಲಟ್ (ಚಾಲಕ)ನ ಜಾಗರೂಕತೆಯಿಂದ ವಿಫಲವಾಗಿದೆ. ನಂಜನಗೂಡು ಮತ್ತು ಕಡಕೋಳ ರೈಲ್ವೆ ನಿಲ್ದಾಣಗಳ ನಡುವಿನ ಹಳಿಗಳ ಮೇಲೆ ಕಬ್ಬಿಣದ ರಾಡು ಮತ್ತು ಮರದ ದಿಮ್ಮಿಗಳನ್ನು ಹಾಕಲಾಗಿತ್ತು. ಇದನ್ನು ದೂರದಿಂದಲೇ ಗಮನಿಸಿದ ಲೋಕೋ ಪೈಲಟ್ ರೈಲು ನಿಲ್ಲಿಸಿ ದುರಂತವನ್ನು ತಪ್ಪಿಸಿದ್ದಾನೆ. ಘಟನೆಯ ತನಿಖೆ ನಡೆಸಿದ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ನಂಜನಗೂಡು-ಕಡಕೋಳ ರೈಲ್ವೆ ಮಾರ್ಗದಲ್ಲಿ ವಿಧ್ವಂಸಕ ಕೃತ್ಯದ ಯತ್ನ ವಿಫಲಗೊಳಿಸಿದ ಲೋಕೋ ಪೈಲಟ್