ಸಂಬಲ್‌ಪುರ (ಒಡಿಶಾ): ಮದುವೆಗೆ ತೆರಳಿದ್ದ ವಾಹನವೊಂದು ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿ ಬಿದ್ದು 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಸಂಬಲ್‌ಪುರದ ಘಮ್ಮನ್ ಕಾಲುವೆ ಬಳಿ ಸಂಭವಿಸಿದೆ. ಮೃತರನ್ನು ಅಜಿತ್ ಖಮಾರಿ, ದಿವ್ಯಾ ಲುಹಾನ್, ಸರೋಜ್ ಸೇಠ್, ಸುಮಂತ್ ಭೋಯ್, ಸುಬಲ್ ಭೋಯ್, ರಮಾಕಾಂತ್ ಭೋಯ್ ಮತ್ತು ಚಾಲಕ ನತಿಘನ್ ಭೋಯ್ ಎಂದು ಗುರುತಿಸಲಾಗಿದೆ.
ಸಂಬಲ್‌ಪುರದ ಪರ್ಮನ್‌ಪುರದಿಂದ ಜಾರ್ಸುಗುಡ ಜಿಲ್ಲೆಯ ಬದ್ಧರ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಅವಘಡ ಜರುಗಿದೆ. ಚಾಲಕನಿಗೆ ಯು-ಟರ್ನ್ ತಿಳಿಯದ ಕಾರಣ ವಾಹನ ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ವಾಹನದಿಂದ ಹೊರಬರಲಾಗದೆ ಉಸಿರುಗಟ್ಟಿ ಏಳು ಮಂದಿ ಸಾವನ್ನಪ್ಪಿದ್ದಾರೆ. ನಸುಕಿನ ಜಾವ 2 ಗಂಟೆಯ ಸುಮಾರಿಗೆ ಅಪಘಾತ ನಡೆದಿದ್ದು ರಾತ್ರಿ ಆಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿತ್ತು. ನಾಲ್ವರು ಗಾಯಾಳುಗಳಿಗೆ ಸಂಬಲ್‌ಪುರ ಜಿಲ್ಲಾ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.