ನೋಯ್ಡಾ: ನೋಯ್ಡಾ ಮೂಲದ ಔಷಧ ಸಂಸ್ಥೆ ಮರಿಯನ್ ಬಯೋಟೆಕ್‌ನ ಕೆಮ್ಮಿನ ಸಿರಪ್ ಡಾಕ್ -1 ಅನ್ನು ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಮತ್ತು ರಾಜ್ಯ ಅಧಿಕಾರಿಗಳು ತನಿಖೆ ನಡೆಸಿ ಈಗಾಗಲೇ ವರದಿ ನೀಡಿದ್ದಾರೆ. ಇದೀಗ ಕೇಸ್ಗೆ ಸಂಬಂಧಪಟ್ಟಂತೆ ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ಉತ್ತರ ಪ್ರದೇಶದ ಅಧಿಕಾರಿಗಳು ಬುಧವಾರ ರದ್ದುಗೊಳಿಸಿದ್ದಾರೆ.
"ಸಂಸ್ಥೆಯ ಪರವಾನಗಿಯನ್ನು ಜನವರಿಯಿಂದ ಅಮಾನತುಗೊಳಿಸಲಾಗಿದ್ದು, ಆ ಬಳಿಕ ವಿಚಾರಣೆ ಪ್ರಾರಂಭಿಸಲಾಗಿದೆ. ಜೊತೆಗೆ, ಸಂಸ್ಥೆಯ ಪರವಾನಗಿಯನ್ನು ಉತ್ತರ ಪ್ರದೇಶ ಡ್ರಗ್ಸ್ ಕಂಟ್ರೋಲಿಂಗ್ ಮತ್ತು ಲೈಸನ್ಸಿಂಗ್ ಪ್ರಾಧಿಕಾರ ರದ್ದುಗೊಳಿಸಿದೆ. ಹಾಗಾಗಿ, ಮರಿಯನ್ ಬಯೋಟೆಕ್ ಇನ್ನು ಮುಂದೆ ಸಿರಪ್ ತಯಾರಿಸಲು ಸಾಧ್ಯವಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಾರ್ಚ್ 3 ರಂದು ನೋಯ್ಡಾ ಪೊಲೀಸರು ಮರಿಯನ್ ಬಯೋಟೆಕ್‌ನ ಮೂವರು ಉದ್ಯೋಗಿಗಳನ್ನು ಸೆಕ್ಟರ್ 67 ರಲ್ಲಿ ಬಂಧಿಸಿದ್ದರು. ಇವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸಂಸ್ಥೆಯ ಇಬ್ಬರು ನಿರ್ದೇಶಕರಿಗೆ ಲುಕ್‌ಔಟ್ ನೋಟಿಸ್ ನೀಡಲಾಯಿತು. ಇಲ್ಲಿನ ಔಷಧಗಳ ಮಾದರಿಗಳು "ಕಲಬೆರಕೆ" ಮತ್ತು ಕಳಪೆ ಗುಣಮಟ್ಟ ಹೊಂದಿದೆ ಎಂದು ತನಿಖೆಯಿಂದ ಬಯಲಾಗಿದೆ. ಮಾದರಿಗಳನ್ನು ಚಂಡೀಗಢದಲ್ಲಿರುವ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕಳುಹಿಸಿದ ಎಲ್ಲಾ ಮಾದರಿಯಲ್ಲಿ 22 ಪ್ರಮಾಣಿತ ಗುಣಮಟ್ಟದ್ದಲ್ಲ (ಕಲಬೆರಕೆ ಮತ್ತು ನಕಲಿ) ಎಂದು ತಿಳಿದು ಬಂದಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 274 (ಔಷಧಗಳ ಕಲಬೆರಕೆ), 275 (ಕಲಬೆರಕೆ ಔಷಧಗಳ ಮಾರಾಟ), 276 (ವಿಭಿನ್ನ ಔಷಧ ಅಥವಾ ವೈದ್ಯಕೀಯ ತಯಾರಿಕೆಯಾಗಿ ಔಷಧ ಮಾರಾಟ) ಹಾಗೂ ಸೆಕ್ಷನ್ 17 (ತಪ್ಪಾಗಿ ಬ್ರಾಂಡ್ ಮಾಡಿದ ಔಷಧಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ, ಈ ಪ್ರಕರಣ 1940 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಉಲ್ಲಂಘನೆಗೆ ಸಹ ಸಂಬಂಧಿಸಿದೆ.