ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ತಮ್ಮ ಪತ್ನಿಯನ್ನು ಭೇಟಿಯಾಗಲು ಶುಕ್ರವಾರ ರೋಸ್ ಅವೆನ್ಯೂ ಕೋರ್ಟ್ ಅನುಮತಿ ನೀಡಿದೆ. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ಸಿಸೋಡಿಯಾ ಐದು ದಿನಗಳ ಕಾಲ ಅನುಮತಿ ಕೋರಿದ್ದರು. ಆದರೆ, ಶನಿವಾರ ಒಂದು ದಿನ ಪತ್ನಿಯ ಭೇಟಿಯಾಗಲು ಕೋರ್ಟ್ ಒಪ್ಪಿಗೆ ಸೂಚಿಸಿದೆ.
ದೆಹಲಿ ಸರ್ಕಾರದ ರದ್ದಗೊಂಡಿರುವ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಮನೀಶ್ ಸಿಸೋಡಿಯಾ ಎದುರಿಸಿದ್ದಾರೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ಪ್ರತ್ಯೇಕ ನಡೆಸುತ್ತಿದೆ. ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಸಿಬಿಐ ಬಂಧಿಸಿತ್ತು. ಬಳಿಕ ಮಾರ್ಚ್ 9ರಂದು ಇಡಿ ಕೂಡ ವಶಕ್ಕೆ ಪಡೆದಿತ್ತು. ಈ ಪ್ರಕರಣಗಳಲ್ಲಿ ಸಿಸೋಡಿಯಾ ಮತ್ತು ಇತರ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಸದ್ಯ ತಿಹಾರ್ ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ಐದು ದಿನಗಳ ಅವಧಿಗೆ ಅನಾರೋಗ್ಯ ಬಳಲುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಿಬಿಐ ಮತ್ತು ಇಡಿ ಸಂಸ್ಥೆಗಳು ಅರ್ಜಿ ವಿರೋಧಿಸಿದ್ದವು. ಆರೋಪಿಯು ಯಾವ ಕಾನೂನು ನಿಬಂಧನೆಗಳ ಅಡಿ ಅನುಮತಿ ಕೋರುತ್ತಿದ್ದಾರೆ?. ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು ಎಂದು ತನಿಖಾ ಸಂಸ್ಥೆಗಳು ಆಕ್ಷೇಪ ಸಲ್ಲಿಸಿದ್ದವು. ಆದರೆ, ಈ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ.ಕೆ ನಾಗಪಾಲ್ ಅವರು ಸಿಸೋಡಿಯಾ ತಮ್ಮ ಪತ್ನಿಯನ್ನು ತಮ್ಮ ಮನೆಯಲ್ಲಿ ಶನಿವಾರ ಬೆಳಗ್ಗೆ 10 ರಿಂದ 4ರ ನಡುವೆ ಪೊಲೀಸ್ ಸಮ್ಮುಖದಲ್ಲಿ ಭೇಟಿಯಾಗಲು ಅವಕಾಶ ನೀಡಿದ್ದಾರೆ.