ಸಿಲ್ಚಾರ್ (ಅಸ್ಸೋಂ) :ಈಶಾನ್ಯ ರಾಜ್ಯಗಳಲ್ಲಿ ಸದಾ ಒಂದಲ್ಲ ಒಂದು ರೀತಿಯ ಸಂಘರ್ಷಗಳು ಉಂಟಾಗುತ್ತಿವೆ. ಇದಕ್ಕೆ ಅಲ್ಲಿರುವ ಉಗ್ರಗಾಮಿ ಸಂಘಟನೆಗಳು ಕಾರಣವಾಗಿವೆ. ಇಂತಹ ಕೃತ್ಯಗಳನ್ನು ನಡೆಸಲು ಆಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡಲು ಅಸ್ಸೋಂ ಪ್ರವೇಶಿಸಿದ್ದ ಮಣಿಪುರದ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ಟ್ರೈಬಲ್ ಲಿಬರೇಶನ್ ಆರ್ಮಿ (ಎಸ್‌ಕೆ ಥಾಡೌ ಗ್ರೂಪ್)ಯ ಸಕ್ರಿಯ ಕಾರ್ಯಕರ್ತನನ್ನು ಅಸ್ಸೋಂನ ಕ್ಯಾಚಾರ್ ಜಿಲ್ಲೆಯಲ್ಲಿ ಶನಿವಾರ ಬಂಧಿಸಲಾಗಿದೆ. ಬಂಧಿತನನ್ನು ಹೆನ್ಲೆನ್‌ಮಾಂಗ್ ಲೌವುಮ್ (26) ಎಂದು ಗುರುತಿಸಲಾಗಿದೆ.
ಮೂಲಗಳಿಂದ ಬಂದ ಮಾಹಿತಿ ಮೇರೆಗೆ ಅಸ್ಸೋಂ ಪೊಲೀಸರು ಮತ್ತು ಅಸ್ಸೋಂ ರೈಫಲ್ಸ್‌ನ ಜಂಟಿ ತಂಡವು ಮಣಿಪುರ ಗಡಿಯ ಸಮೀಪವಿರುವ ಕ್ಯಾಚಾರ್‌ನ ಖಾಸಿಯಾ ಪೂಂಜೀ ಘಾಟ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಹೆನ್ಲೆನ್‌ಮಾಂಗ್ ಲೌವುಮ್ ಸಿಕ್ಕಿಬಿದ್ದಿದ್ದು, ಈತನ ಬಳಿಯಿದ್ದ 32 ಎಂಎಂ ಪಿಸ್ತೂಲ್ (7.65 ಯುಎಸ್‌ಎ), ಐದು ಸುತ್ತಿನ ಮದ್ದು ಗುಂಡುಗಳೊಂದಿಗೆ ಮ್ಯಾಗಜೀನ್ ಮತ್ತು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈತ ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮಣಿಪುರದಿಂದ ಅಸ್ಸೋಂ ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯುನೈಟೆಡ್ ಟ್ರೈಬಲ್ ಲಿಬರೇಶನ್ ಆರ್ಮಿ ಸಂಘಟನೆಯು ಮಣಿಪುರದ ಜಿರಿಬಾಮ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ಕ್ಯಾಚಾರ್ ಜಿಲ್ಲೆಯಲ್ಲಿ ತನ್ನ ಆಸ್ತಿತ್ವವನ್ನು ಹೊಂದಿದೆ. 2012 ರಿಂದ ಮಣಿಪುರದಲ್ಲಿ ಕಾರ್ಯಾಚರಣೆಯನ್ನು ಅಮಾನತುಗೊಳಿಸಿರುವ ಉಟ್ಲಾ (ರಾಬರ್ಟ್ ಸಿಂಗ್ಸನ್ ಗ್ರೂಪ್) ನಿಂದ ಅದರ ಕಾರ್ಯಕರ್ತರು ಪಕ್ಷಾಂತರಗೊಂಡು ಈ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಜನಾಂಗೀಯ ಘರ್ಷಣೆಗಳಿಂದಾಗಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಮಣಿಪುರವು 30ಕ್ಕೂ ಹೆಚ್ಚು ಉಗ್ರಗಾಮಿ ಸಂಘಟನೆಗಳನ್ನು ಒಳಗೊಂಡಿದೆ.
ಶಂಕಿತ ಬುಡಕಟ್ಟು ಉಗ್ರಗಾಮಿಗಳ ಗುಂಡಿಗೆ ಪೊಲೀಸ್ ಬಲಿ : ಕಳೆದು ತಿಂಗಳು ಅ. 31 ರಂದು ಮಣಿಪುರದ ತೆಂಗನೌಪಾಲ್ ಜಿಲ್ಲೆಯ ಮೋರೆಹ ಎಂಬಲ್ಲಿ ಶಂಕಿತ ಬುಡಕಟ್ಟು ಉಗ್ರಗಾಮಿಗಳ ಗುಂಡಿಗೆ ಉಪವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದರು. ಕುಕಿ- ಝೋ ಸಮುದಾಯದ ಜನರ ಪ್ರಾಬಲ್ಯವಿರುವ ಈಸ್ಟರ್ನ್ ಗ್ರೌಂಡ್ನಲ್ಲಿ ಹೊಸದಾಗಿ ನಿರ್ಮಿಸಲಾದ ಹೆಲಿಪ್ಯಾಡ್ ಅನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿತ್ತು. ಮೋರೆಹ ಎಸ್ಡಿಪಿಒ ಚಿಂಗ್ತಮ್ ಆನಂದ್ ಎಂಬ ಪೊಲೀಸ್ ಅಧಿಕಾರಿ ಉಗ್ರಗಾಮಿಗಳ ಗುಂಡು ತಗುಲಿ ಕೊನೆಯುಸಿರೆಳೆದಿದ್ದರು ಎಂದು ಅಲ್ಲಿನ ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.
ಇದನ್ನೂ ಓದಿ :ಶಾಂತಿಯುತ ಪ್ರದೇಶಗಳಲ್ಲಿ ಇಂಟರ್ನೆಟ್ ನಿರ್ಬಂಧ ಸಡಿಲಿಸಿ: ಮಣಿಪುರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ