ಅಗರ್ತಲಾ (ತ್ರಿಪುರಾ): ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಅವರಿಂದು ಪ್ರಮಾಣ ವಚನ ಸ್ವೀಕರಿಸಿದರು. ಬಿಪ್ಲಬ್ ಕುಮಾರ್ ದೇವ್ ಶನಿವಾರ ರಾಜೀನಾಮೆ ನೀಡಿದ್ದರಿಂದ ಸಿಎಂ ಸ್ಥಾನ ತೆರವಾಗಿತ್ತು.
ತ್ರಿಪುರಾದ 11ನೇ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪದಗ್ರಹಣ - ನೂತನ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಪದಗ್ರಹಣ
ತ್ರಿಪುರಾದ ನೂತನ ಮುಖ್ಯಮಂತ್ರಿ ಮಾಣಿಕ್ ಸಹಾ ಅವರಿಗೆ ರಾಜ್ಯಪಾಲ ಪದ್ಮನಾಭ ಆಚಾರ್ಯ ಅಧಿಕಾರದ ಗೋಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ತ್ರಿಪುರಾ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯಸಭಾ ಸದಸ್ಯರಾಗಿರುವ ಮಾಣಿಕ್ ಸಹಾ ಅವರನ್ನು ಶನಿವಾರ ಬಿಪ್ಲಬ್ ದೇವ್ ರಾಜೀನಾಮೆ ನೀಡಿದ ಕೆಲವೇ ಕ್ಷಣದಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದರ ಮರುದಿನವೇ ನೂತನ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ಮುಂದಿನ ವರ್ಷವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಡೆಯಲಿದ್ದು, ಸಿಎಂ ಬದಲಾವಣೆಯು ಬಿಜೆಪಿಯ ಚುನಾವಣಾ ತಂತ್ರದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇತ್ತ, 2018ರಿಂದ ಸಿಎಂ ಆಗಿ ಆಯ್ಕೆಯಾಗಿದ್ದ ಬಿಪ್ಲಬ್ ದೇವ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಾಜೀನಾಮೆ ನಂತರ ಮಾತನಾಡಿದ್ದ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನಗೆ ನೀಡಿರುವ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದು ಹೇಳಿಕೊಂಡಿದ್ದರು.