ಮಂಡಿ (ಹಿಮಾಚಲಪ್ರದೇಶ):ಹಿಮಾಚಲಪ್ರದೇಶದಲ್ಲಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದ ಬಳಿಕ ಇದೀಗ ಮತ್ತೊಂದು ಬಹುರಾಷ್ಟ್ರೀಯ ಕಂಪನಿ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕ್ಯೂಎಫ್‌ಎಕ್ಸ್ ಕಂಪನಿಯು ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ಜನರಿಂದ ಹಣ ಪಡೆದು ಹೆಚ್ಚಿನ ಆದಾಯದ ಕನಸುಗಳನ್ನು ತೋರಿಸಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಬರೋಬ್ಬರಿ 210 ಕೋಟಿ ರೂ. ಗಳ ವಂಚನೆ ನಡೆದಿದೆ ಎಂದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣದಲ್ಲಿ ದೆಹಲಿ ಮತ್ತು ಹರಿಯಾಣ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ಸಾಂಬಶಿವನ್ ಪ್ರತಿಕ್ರಿಯೆ ನೀಡಿದ್ದು, ವಿಷಯ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ವಿದೇಶಕ್ಕೆ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದರು, ಇದೀಗ ಅವರನ್ನು ಬಂಧಿಸಲಾಗಿದೆ. ಚಂಡೀಗಢ ಹೊರತುಪಡಿಸಿ ದೇಶದ ಐದು ರಾಜ್ಯಗಳಲ್ಲಿ ಈ ಜಾಲ ಹರಡಿತ್ತು. ಕಂಪನಿಯು ಹಿಮಾಚಲ, ಪಂಜಾಬ್, ಗೋವಾ, ಗುಜರಾತ್ ಮತ್ತು ಚಂಡೀಗಢದಲ್ಲಿ ನೆಟ್‌ವರ್ಕ್ ಹೊಂದಿದ್ದು, ಇದರಲ್ಲಿ ನೂರಾರು ಜನರ ಹಣ ಹೂಡಿಕೆ ಮಾಡಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಕೆಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಕ್ಯೂಎಫ್‌ಎಕ್ಸ್ ಕಂಪನಿ ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ಯಾವುದೇ ಪರವಾನಗಿ ಪಡೆಯದೇ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಕಂಪನಿಯ ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಸುಮಾರು 30 ಲಕ್ಷ ರೂಪಾಯಿ ಮೊತ್ತದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಎರಡು ಕಚೇರಿಗಳನ್ನು ಸೀಲ್ ಮಾಡಲಾಗಿದೆ. ಅಲ್ಲದೇ ಈ ಸಂಬಂಧ ಎರಡು - ಮೂರು ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಿದಾಗ ಪ್ರಾಥಮಿಕ ತನಿಖೆಯಲ್ಲಿ ಹಲವು ಮಹತ್ವದ ಸಂಗತಿಗಳು ಪತ್ತೆಯಾಗಿವೆ.