ಸೋನಿತ್ಪುರ,ಅಸ್ಸೋಂ: ಸ್ವಾತಂತ್ರ್ಯೋತ್ಸವದ ಮಧ್ಯ ರಾತ್ರಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಶಿರಚ್ಛೇದ ಮಾಡಿದ ಘಟನೆ ಅಸ್ಸೋಂನಲ್ಲಿ ನಡೆದಿದೆ. ಕೊಟ್ಟ ಹಣ ವಾಪಸ್ ಕೇಳಿದ್ದ ವ್ಯಕ್ತಿಯೊಬ್ಬ ಸ್ನೇಹಿತನ ಕೊಂದು ಸೋನಿತ್ಪುರ ಜಿಲ್ಲೆಯ ರಂಗಪಾರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ವ್ಯಕ್ತಿಯ ಕೈಯಲ್ಲಿದ್ದ ತಲೆಯನ್ನು ಕಂಡು ಠಾಣೆಯ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಶಿರಚ್ಛೇದ ಮಾಡಿದ ವ್ಯಕ್ತಿಯನ್ನು ತುನಿರಾಮ್ ಮಾದ್ರಿ (25) ಎಂದು ಗುರುತಿಸಲಾಗಿದೆ.
ನಡೆದ ಘಟನೆ ಏನು?: ಇಲ್ಲಿನ ರಂಗಪಾರ ಪೊಲೀಸ್ ಠಾಣಾ ವ್ಯಾಪ್ತಿಯ ದಯಾಲ್ಪುರ ಗ್ರಾಮದ ನಿವಾಸಿ ತುನಿರಾಮ್ ಮಾದ್ರಿ ಅದೇ ಗ್ರಾಮದ ನಿವಾಸಿ ಬ್ರೈಲರ್ ಹೇಮ್ರಾಮ್ (55) ಅವರ ತಲೆ ಕಡಿದು ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯಾದ ವ್ಯಕ್ತಿಯ ತಲೆ ಮತ್ತು ಚಾಕುವಿನೊಂದಿಗೆ ಸುಮಾರು 10 ಕಿಲೋಮೀಟರ್ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ.