ಹೈದರಾಬಾದ್ :2015ನೇ ಇಸವಿಯಿಂದ ಈವರೆಗ ಸಂಭವಿಸಿದ ಕೆಲ ಪ್ರಮುಖ ಹಾಗೂ ಭೀಕರ ಬಸ್ ಅಪಘಾತಗಳ ಪಟ್ಟಿ ಇಲ್ಲಿದೆ.
16.02.21, ಮಧ್ಯಪ್ರದೇಶ :ಇಲ್ಲಿನ ಸಿಧಿ ಜಿಲ್ಲೆಯಲ್ಲಿ ಪ್ಯಾಸೆಂಜರ್ ಬಸ್ ಕಾಲುವೆಗೆ ಧುಮುಕಿದ ಪರಿಣಾಮ ಕನಿಷ್ಠ 49 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ತಮ್ಮ ಆಸನಗಳಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಮೃತಪಟ್ಟವರಲ್ಲಿ ಇಪ್ಪತ್ತು ಮಹಿಳೆಯರು ಸೇರಿದ್ದಾರೆ.
ಅವರಲ್ಲಿ ಹೆಚ್ಚಿನವರು 140 ಕಿ.ಮೀ ದೂರದಲ್ಲಿರುವ ಸತ್ನಾ ಪಟ್ಟಣದಲ್ಲಿ ಎಎನ್‌ಎಂ ಪರೀಕ್ಷೆಗೆ ಹಾಜರಾಗಲು ಹೊರಟಿದ್ದರು. ಬಲಿಯಾದವರಲ್ಲಿ ಅರ್ಧದಷ್ಟು ಜನ ಮಹಿಳೆಯರೊಂದಿಗೆ ಬಂದಿದ್ದ ಅವರ ತಂದೆ ಮತ್ತು ಸಹೋದರರಾಗಿದ್ದರು.
ಸಾವನ್ನಪ್ಪಿದವರಲ್ಲಿ 3 ತಿಂಗಳ ಮಗು ಸೇರಿ ಇಬ್ಬರು ಮಕ್ಕಳಿದ್ದಾರೆ. ಬೆಳಗ್ಗೆ 7: 30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಾಲುವೆಗೆ ಬಿದ್ದಿದ್ದು, 50ಕ್ಕೂ ಅಧಿಕ ಪ್ರಯಾಣಿಕರು ಬಸ್‌ನಲ್ಲಿದ್ದರು.
20.02.20, ತಮಿಳುನಾಡು :ಮೂರು ಭೀಕರ ಅಪಘಾತಗಳಲ್ಲಿ 20 ಜನ ಸಾವನ್ನಪ್ಪಿದ್ದರು. 45 ಪ್ರಯಾಣಿಕರಿದ್ದ ಕೊಚ್ಚಿ ಮೂಲದ ಕೇರಳ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಬಸ್ ಕಂಟೇನರ್‌ಗೆ ಡಿಕ್ಕಿ ಹೊಡೆದ ಪರಿಣಾಮ 20 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಕೊಯಮತ್ತೂರು ಬಳಿ ಮುಂಜಾನೆ 3ರ ಸುಮಾರಿಗೆ ನಡೆದ ಘಟನೆಯಲ್ಲಿ ಇತರ 23 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿತ್ತು.
26.02.20, ರಾಜಸ್ಥಾನ :ಬುಂಡಿ ಜಿಲ್ಲೆಯಲ್ಲಿ ಪ್ರಯಾಣಿಕರು ತುಂಬಿದ ಬಸ್ ನದಿಗೆ ಬಿದ್ದು 24 ಜನರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದರು. ಬಸ್ ಮದುವೆಯ ದಿಬ್ಬಣಕ್ಕೆ ಹೊರಟಿತ್ತು. ಬುಂಡಿ ಜಿಲ್ಲೆಯ ಲಖೇರಿ ಪಟ್ಟಣದಲ್ಲಿ ಈ ಘಟನೆ ನಡೆದಿತ್ತು.
24.11.18, ಕರ್ನಾಟಕ :ಮಂಡ್ಯ ಜಿಲ್ಲೆಯಲ್ಲಿ ಬಸ್ ಕಾಲುವೆಗೆ ನುಗ್ಗಿ ಕನಿಷ್ಠ 30 ಪ್ರಯಾಣಿಕರು ಸಾವನ್ನಪ್ಪಿದ್ದರು. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಕಾವೇರಿ ನದಿಯ ಕಾಲುವೆಯಲ್ಲಿ ಈ ಘಟನೆ ನಡೆದಿತ್ತು. ಮೃತಪಟ್ಟವರಲ್ಲಿ ಹೆಚ್ಚಿನವರು ಶಾಲಾ ವಿದ್ಯಾರ್ಥಿಗಳು. 35 ಪ್ರಯಾಣಿಕರನ್ನು ಹೊತ್ತ ಬಸ್ 12 ಅಡಿ ಆಳದ ನೀರಿನಲ್ಲಿ ಸಂಪೂರ್ಣ ಮುಳುಗಿತ್ತು.