ಕರ್ನಾಟಕ

karnataka

ETV Bharat / bharat

ಉದ್ಯಮಿಯಿಂದ ಹಣ ಪಡೆದು ಸದನದಲ್ಲಿ ಪ್ರಶ್ನೆ ಕೇಳಿದ ಆರೋಪ: ಟಿಎಂಸಿ ಸಂಸದೆ ವಿರುದ್ಧ ಸ್ಪೀಕರ್​ಗೆ ಬಿಜೆಪಿ ದೂರು - ಉದ್ಯಮಿಯಿಂದ ಹಣ ಪಡೆದು ಸದನದಲ್ಲಿ ಪ್ರಶ್ನೆ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಮೇಲೆ ಸದನದಲ್ಲಿ ಹಣಕ್ಕೆ ಪ್ರಶ್ನೆ ಕೇಳಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಬಿಜೆಪಿ ಸಂಸದ ಲೋಕಸಭೆ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ.

ಟಿಎಂಸಿ ಸಂಸದೆ ವಿರುದ್ಧ ಸ್ಪೀಕರ್​ಗೆ ಬಿಜೆಪಿ ದೂರು
ಟಿಎಂಸಿ ಸಂಸದೆ ವಿರುದ್ಧ ಸ್ಪೀಕರ್​ಗೆ ಬಿಜೆಪಿ ದೂರು

By ETV Bharat Karnataka Team

Published : Oct 15, 2023, 8:05 PM IST

ನವದೆಹಲಿ:ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಹಣ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಕ್ಷಣದಿಂದಲೇ ಅವರನ್ನು ಅಮಾನತಿನಲ್ಲಿಡಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಲೋಕಸಭೆ ಸ್ಪೀಕರ್​ಗೆ ಭಾನುವಾರ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ 'ಸಿಬಿಐ ತನಿಖೆಗೂ ತಾವು ಸಿದ್ಧ' ಎಂದಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಭಾನುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ, ಟಿಎಂಸಿ ಸಂಸದೆ ಮೊಯಿತ್ರಾ ಅವರು ಸದನದಲ್ಲಿ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳನ್ನ ಉದ್ಯಮಿಯೊಬ್ಬರ ಕಂಪನಿಯ ಪರವಾಗಿಯೇ ಕೇಳಿದ್ದಾರೆ. ಇದಕ್ಕಾಗಿ ಅವರು ಲಂಚದ ರೂಪದಲ್ಲಿ ಹಣ ಮತ್ತು ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ ಎಂದು ಕೆಲ ದಾಖಲೆಗಳನ್ನೂ ನೀಡಿದ್ದಾರೆ.

ಉದ್ಯಮಿಯಿಂದ ಹಣ ಪಡೆದುಕೊಂಡು ಅವರ ಪರವಾಗಿ ಪ್ರಶ್ನೆಗಳನ್ನು ಕೇಳಿ, ಸದನದ ಗೌರವ ಮತ್ತು ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಬೇಕು. ತಕ್ಷಣದಿಂದಲೇ ಅವರನ್ನು ಅಮಾನತು ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪಿಎಂ ಮೋದಿ, ಅಮಿತ್ ಶಾ ಟಾರ್ಗೆಟ್​:ಇಡೀ ಪಿತೂರಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಟೀಕಿಸಲೆಂದೇ ಅವರು ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಮತ್ತು ಮಾಹಿತಿಯನ್ನು ಉದ್ಯಮಿಗಳೊಂದಿಗೆ ಸಂಸದೆ ಹಂಚಿಕೊಂಡಿದ್ದಾರೆ. ಈ ದಾಖಲೆಗಳನ್ನೂ ಪತ್ರದೊಂದಿಗೆ ಲಗತ್ತಿಸಿರುವುದಾಗಿ ದುಬೆ ತಿಳಿಸಿದ್ದಾರೆ.

ಈ ಎಲ್ಲಾ ವಿದ್ಯಮಾನಗಳನ್ನು ಪರಿಶೀಲಿಸಿದ ಬಳಿಕ ಟಿಎಂಸಿ ಸಂಸದೆ ಉದ್ಯಮಿ ಮತ್ತು ಕಂಪನಿಯ ಪರವಾಗಿ ಪ್ರಶ್ನೆ ಕೇಳಿದ್ದು ತಿಳಿದುಬಂದಿದೆ. ಇದೊಂದು ಕ್ರಿಮಿನಲ್ ಪಿತೂರಿಯಾಗಿದ್ದು, ಸಂವಿಧಾನ ನೀಡಿದ ಸವಲತ್ತು ಮತ್ತು ಹಕ್ಕನ್ನು ಅವರು ಉಲ್ಲಂಘಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 120A ಪ್ರಕಾರ ಇದು ಕ್ರಿಮಿನಲ್ ಅಪರಾಧ ಕೂಡ ಎಂದು ಅವರು ಹೇಳಿದ್ದಾರೆ.

ಆರೋಪ ನಿರಾಧಾರ, ಸಿಬಿಐ ತನಿಖೆಗೆ ರೆಡಿ:ಬಿಜೆಪಿ ಸಂಸದ ಮಾಡಿರುವ ಗಂಭೀರ ಆರೋಪವನ್ನು ಟಿಎಂಸಿ ಸಂಸದೆ ನಿರಾಕರಿಸಿದ್ದು, ಸಿಬಿಐ ತನಿಖೆಗೂ ತಾವು ಸಿದ್ಧ. ಇದೊಂದು ಸುಳ್ಳು ಆರೋಪ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಸರಣಿ ಪೋಸ್ಟ್​ ಮಾಡಿರುವ ಅವರು, ನಕಲಿ ಪದವೀಧರ ಮತ್ತು ಇತರ ಬಿಜೆಪಿ ದಿಗ್ಗಜರ ವಿರುದ್ಧ ಬಾಕಿ ಉಳಿದಿರುವ ಸಾಂವಿಧಾನಿಕ ಸವಲತ್ತುಗಳ ಉಲ್ಲಂಘನೆ ಪ್ರಕರಣವನ್ನು ಮೊದಲು ವಿಚಾರಣೆ ನಡೆಸಲಿ. ಬಳಿಕ ಸ್ಪೀಕರ್ ಅವರು ನನ್ನ ವಿರುದ್ಧದ ಆರೋಪವನ್ನು ವಿಚಾರಿಸಲಿ. ಜೊತೆಗೆ ಅದಾನಿ ಹಗರಣದಲ್ಲಿ ಇಡಿ ಮತ್ತು ಇತರ ತನಿಖಾ ಸಂಸ್ಥೆಗಳು ಎಫ್‌ಐಆರ್ ದಾಖಲಿಸಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮೋದಿ ಭಾರತ vs ಸೆಕ್ಯುಲರ್ ಇಂಡಿಯಾ: 2024ರ ಲೋಕಸಭೆ ಚುನಾವಣೆ ಕುರಿತ ಪುಸ್ತಕ ಬಿಡುಗಡೆಗೆ ಸಜ್ಜು

ABOUT THE AUTHOR

...view details