ಝಾಬುವಾ (ಮಧ್ಯಪ್ರದೇಶ): ಹನಿ ಹನಿ ನೀರಿಗೂ ಇಂಥ ಪರಿಸ್ಥಿತಿ.. ಜೀವಜಲಕ್ಕಾಗಿ ಜೀವವನ್ನೇ ಪಣಕ್ಕಿಡ್ತಿದಾರೆ. ಬೆಟ್ಟ ಗುಡ್ಡಗಳಿಂದಲೇ ಸುತ್ತವರಿದಿರುವ ಮಧ್ಯಪ್ರದೇಶದ ಝಾಬುವಾ ಪ್ರದೇಶದ ಜನ ನೀರಿಗಾಗಿ ಪ್ರಾಣವನ್ನೂ ಲೆಕ್ಕಿಸುತ್ತಿರಲಿಲ್ಲ. ಮಾಲವಾಂಚಲ್ನಲ್ಲಿ ನೆಲೆಸಿರುವ ಈ ಬುಡಕಟ್ಟು ಜನರು ಒಂದು ಬಿಂದಿಗೆ ನೀರಿಗಾಗಿ ಕಿಲೋಮೀಟರ್ಗಟ್ಟಲೇ ಪ್ರಯಾಣಿಸಬೇಕಿತ್ತು. ಆಗ ಇವರ ಪಾಲಿಗೆ ಬಂದ ಆಧುನಿಕ ಭಗೀರಥ, ಪದ್ಮಶ್ರೀ ಮಹೇಶ್ ಶರ್ಮಾ.
ಇವರು ಝಾಬುವಾ ಜಿಲ್ಲೆಯ ಬುಡಕಟ್ಟು ಜನಾಂಗದ ಹಳೆಯ ಸಂಪ್ರದಾಯವಾದ ಹಲ್ಮಾ ಮೂಲಕ ನೀರಿನ ಸಂರಕ್ಷಣಾ ಅಭಿಯಾನ ಆರಂಭಿಸಿದರು. ಹಲ್ಮಾ ಎಂಬುದು ಭಿಲಿ ಉಪಭಾಷೆಯ ಪದ. ಅವರು ಝಾಬುವಾ ಜಿಲ್ಲೆಯ ಅತಿದೊಡ್ಡ ಬೆಟ್ಟವಾದ ಹಾತಿಪಾವಾದಲ್ಲಿ ಬುಡಕಟ್ಟು ಜನಾಂಗದವರ ಸಹಾಯದಿಂದ ಕಂದಕ ಕೊರೆಯುವ ಕೆಲಸ ಪ್ರಾರಂಭಿಸಿದರು. ಅಲ್ಲಿ 73 ಸಣ್ಣ ಮತ್ತು ದೊಡ್ಡ ಕೊಳಗಳನ್ನು ನಿರ್ಮಿಸಿದರು. ಇದರಿಂದಾಗಿ ಝಾಬುವಾ ಸೇರಿ ಹತ್ತಿರದ ಜಿಲ್ಲೆಗಳ ಜನರ ಬಾಯಾರಿಕೆ ನೀಗುತ್ತಿದೆ. ನೀರಿನ ಸಂರಕ್ಷಣೆ ಜತೆ ಜೊತೆಗೆ ಇಲ್ಲಿ ಅಂತರ್ಜಲ ಮಟ್ಟವೂ ಹೆಚ್ಚುತ್ತಿರುವುದು ವಿಶೇಷ.
73 ಕೊಳಗಳ ಮೂಲಕ ನೀರಿನ ಸಂರಕ್ಷಣೆ ಮಾಡಿರುವ ವಿಧಾನ ಬಲು ರೋಚಕವಾಗಿದೆ. ಮೊಟ್ಟ ಮೊದಲು ಅವರು ಬೆಟ್ಟದ ಕೆಳಗೆ ಗುಂಡಿಗಳನ್ನು ಅಗೆದರು. ಆ ಗುಂಡಿಗಳಲ್ಲಿ ಬಂದ ನೀರು ಸಂಗ್ರಹವಾಗಲು ಬೆಟ್ಟದ ಕೆಳಭಾಗದಲ್ಲಿ ಕೊಳಗಳನ್ನು ನಿರ್ಮಿಸಿದರು. ಬಳಿಕ ಈ ಕೊಳಗಳಿಗೆ ಚಿಕ್ಕ ಚಿಕ್ಕ ಕಂದಕಗಳನ್ನು ಕೊರೆದರು. ಈ ಕಂದಕಗಳು ಮಣ್ಣಿನಿಂದ ಮುಚ್ಚಬಾರದು ಎಂಬ ಉದ್ದೇಶದಿಂದ ಅವುಗಳ ಅಕ್ಕಪಕ್ಕದಲ್ಲಿ ಮರಗಳನ್ನು ಬೆಳೆಸಿದರು. ನೀರನ್ನು ಸಂರಕ್ಷಿಸುವ ಸಲುವಾಗಿ ಟ್ಯಾಂಕ್ಗಳನ್ನು ನಿರ್ಮಿಸಿದರು. ಹೀಗೆ ಮಳೆ ಬಂದಾಗ ಬೆಟ್ಟದ ಮೇಲಿನಿಂದ ನೀರು ಹರಿದು ವ್ಯರ್ಥವಾಗುವ ಬದಲು, ಕಂದಕಗಳ ಮೂಲಕ ಊರಿನಲ್ಲಿ ನಿರ್ಮಿಸಲಾದ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗ ಹತ್ತಿತು.