ಮುಂಬೈ(ಮಹಾರಾಷ್ಟ್ರ):ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಜಾರಿ ಮಾಡಲಾಗಿದ್ದ ಲಾಕ್ಡೌನ್ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲ ಪೊಲೀಸ್ ಪ್ರಕರಣಗಳನ್ನೂ ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಖುದ್ದು ರಾಜ್ಯದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಸಂಬಂಧದಲ್ಲಿ ಐಪಿಸಿ 188ರಡಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ವಿರುದ್ಧದ ದಾಖಲಿಸಿ ಪ್ರಕರಣಗಳ ವಾಪಸಾತಿಗೆ ಗೃಹ ಇಲಾಖೆಯ ತೀರ್ಮಾನಿಸಿದೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದರೆ, ಎಲ್ಲ ಕೇಸ್ಗಳ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ ಎಂದು ಗೃಹ ಸಚಿವ ವಾಲ್ಸೆ ತಿಳಿಸಿದ್ದಾರೆ.
ಮಹಾಮಾರಿ ಕೊರೊನಾ ಸೋಂಕು ನಿಯಂತ್ರಿಸಲು ಎಲ್ಲ ರಾಜ್ಯಗಳು ಲಾಕ್ಡೌನ್ ಮೊರೆ ಹೋಗಿದ್ದವು. ಲಾಕ್ಡೌನ್ ನಡುವೆ ಜನತೆ ರಸ್ತೆಗಳಿಗೆ ಬಂದರೆ, ಅಂತಹವರು ವಿರುದ್ಧ ಲಾಕ್ಡೌನ್ ಉಲ್ಲಂಘನೆಗೆ ಆರೋಪದಡಿ ಪೊಲೀಸರು ಮುಲಾಜಿಲ್ಲದೇ ಕೇಸ್ ಹಾಕುತ್ತಿದ್ದರು. ಇದರಿಂದ ತುರ್ತು ಮತ್ತು ಅನಿವಾರ್ಯ ಕಾರಣಗಳಿಗೆ ಹೊರಗಡೆ ಬಂದರೂ ಸಹ ತೊಂದರೆ ಅನುಭವಿಸುವಂತೆ ಆಗಿತ್ತು. ಜತೆಗೆ ದಂಡವನ್ನೂ ತೆರುವಂತಾಗಿತ್ತು.
ಆದರೆ, ಇದೀಗ ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸದ್ಯ ಕೇವಲ 954 ಸಕ್ರಿಯ ಪ್ರಕರಣಗಳು ಮಾತ್ರವೇ ಇವೆ. ಇತ್ತ, ದೇಶದಲ್ಲಿ ಕಳೆದ 24 ವರ್ಷಗಳಲ್ಲಿ 1,259 ಹೊಸ ಪ್ರಕರಣಗಳು ಮಾತ್ರ ದಾಖಲಾಗಿವೆ.
ಇದನ್ನೂ ಓದಿ:ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಸವಾಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್