ಮುಂಬೈ:ರಾಜ್ಯದಲ್ಲಿ ಮರಾಠಾ ಮೀಸಲಾತಿ, ಶಾಸಕರ ಅನರ್ಹತೆ ವಿಚಾರವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸಿದ್ದು, ಆರೋಪ - ಪ್ರತ್ಯಾರೋಪಗಳ ಸುರಿಮಳೆಯನ್ನೇ ಮಾಡಲಾಗುತ್ತಿದೆ. ಏತನ್ಮಧ್ಯೆ ಶಿಂಧೆ ಬಣದ ಹದಿನಾರು ಶಾಸಕರ ಅನರ್ಹತೆ ಕುರಿತಂತೆ ನ.2ರಂದು ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಅವರ ಅಧ್ಯಕ್ಷತೆಯಲ್ಲಿ ವಿಚಾರಣೆ ನಡೆದಿತ್ತು.
ಈಗ ಮುಂದಿನ ವಿಚಾರಣೆ ನವೆಂಬರ್ 21 ರಂದು ನಡೆಯಲಿದೆ. ಆದರೆ, ಅದಕ್ಕೂ ಮುನ್ನವೇ ರಾಜ್ಯದ ರಾಜಕೀಯ ವ್ಯವಹಾರಗಳು ವೇಗ ಪಡೆದುಕೊಂಡಿದ್ದು, ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಇಂದು ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದು ಈ ಬಗ್ಗೆ ರಾಜಕೀಯ ವಲಯದಲ್ಲಿ ಬಾರಿ ಚೆರ್ಚೆಗಳು ನಡೆಯುತ್ತಿವೆ.
ಭೇಟಿಗೆ ಕಾರಣ?:ಪಕ್ಷದ ಮೂಲಗಳ ಪ್ರಕಾರ, ರಾಹುಲ್ ನಾರ್ವೇಕರ್ ಅವರು ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾಗಿ ವಿಧಾನಸಭೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ. ಜತೆಗೆ ಶಾಸಕರ ಅನರ್ಹತೆ ಸೇರಿ ಇತರ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ನಾರ್ವೇಕರ್ ಭೇಟಿಗೆ ರಾಷ್ಟ್ರಪತಿಗಳು ಸಂಜೆ ಸಮಯ ನೀಡಿದ್ದಾರೆ ಎಂದು ಹೇಳಲಾಗಿದೆ.
ಏತನ್ಮಧ್ಯೆ ಶಿಂಧೆ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆಯ ಪ್ರತಿಸ್ಪರ್ಧಿ ಬಣಗಳು ಸಲ್ಲಿಸಿರುವ ಅರ್ಜಿಗಳ ಕುರಿತು ಡಿಸೆಂಬರ್ 31 ರೊಳಗೆ ತೀರ್ಮಾನಿಸುವಂತೆ ಸುಪ್ರೀಂ ಕೋರ್ಟ್ ಅಕ್ಟೋಬರ್ 30 ರಂದು ನಾರ್ವೇಕರ್ ಅವರಿಗೆ ಸೂಚಿಸಿತ್ತು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕರ ಅನರ್ಹತೆ ಅರ್ಜಿಗಳ ತೀರ್ಪನ್ನು ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತಿರುವುದನ್ನು ಸುಪ್ರೀಂ ಕೋರ್ಟ್ ಗಮನಿಸಿ ಕಳೆದ ವಿಚಾರಣೆಯಲ್ಲಿ ವಿಧಾನಸಭಾಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಕಾಲದಲ್ಲಿ ಈ ಕುರಿತು ನಿರ್ಧರಿಸಲು ಸಾಧ್ಯವಾಗದಿದ್ದರೆ ನಾವೇ ತೀರ್ಮಾನ ಮಾಡುತ್ತೇವೆ ಎಂದು ನ್ಯಾಯಾಲಯ ಹೇಳಿತ್ತು. ಇದಾದ ನಂತರ ಅಕ್ಟೋಬರ್ 26 ರಂದು ನಡೆದ ವಿಚಾರಣೆಯಲ್ಲಿ ಶಿಂಧೆ ಗುಂಪು ಸಾಕಷ್ಟು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು 14 ದಿನಗಳ ಕಾಲಾವಕಾಶ ಕೇಳಿತ್ತು. ಅದರ ನಂತರ ನವೆಂಬರ್ 2 ರಂದು ನಡೆದ ವಿಚಾರಣೆಯಲ್ಲಿ ರಾಷ್ಟ್ರಪತಿಗಳಿಗೆ ನವೆಂಬರ್ 16 ರೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಶಿಂಧೆ ಮತ್ತು ಠಾಕ್ರೆ ಗುಂಪಿಗೆ ಸೂಚಿಸಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆ ನ.21ರಂದು ನಡೆಯಲಿದೆ.
ಶಾಸಕರ ಅನರ್ಹತೆ ಅರ್ಜಿ: 2022ರ ಜೂನ್‌ನಲ್ಲಿ ಶಿಂಧೆ ಬಣದ 40 ಶಾಸಕರು ಬಂಡಾಯವೆದ್ದು, ಶಿವಸೇನೆ ತೊರೆದು ಬಿಜೆಪಿಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಿದರು. ಇದಾದ ನಂತರ ಏಕನಾಥ್ ಶಿಂಧೆ ಶಿವಸೇನೆ ನಮ್ಮದು ಎಂದು ಹೇಳಿದರೆ, ಉದ್ಧವ್ ಠಾಕ್ರೆ ಕೂಡ ಮೂಲ ಶಿವಸೇನೆ ನಮ್ಮದು ಎಂದು ಹೇಳಿದ್ದರು. ಕೆಲವು ತಿಂಗಳ ಹಿಂದೆ ಚುನಾವಣಾ ಆಯೋಗವು ಶಿಂಧೆ ಅವರ ಬಣಕ್ಕೆ ಶಿವಸೇನೆ ಹೆಸರು ಮತ್ತು ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ನೀಡಿತು. ಆದರೆ, ಇದಕ್ಕೂ ಮುನ್ನ ಶಿಂಧೆ ಗುಂಪಿನ 16 ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ಠಾಕ್ರೆ ಗುಂಪು ಅರ್ಜಿ ಸಲ್ಲಿಸಿತ್ತು.
ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಬಾರಿ ವಿಚಾರಣೆಗಳು ನಡೆದಿವೆ. ಆದರೆ, ಕೆಲ ತಿಂಗಳ ಹಿಂದೆ ಈ ಕುರಿತು ನಿರ್ಣಯ ನೀಡುವಾಗ ವಿಧಾನಸಭಾಧ್ಯಕ್ಷರು ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿ ಸುಪ್ರೀಂ ಕೋರ್ಟ್ ವಿಧಾನಸಭಾಧ್ಯಕ್ಷರಿಗೆ ನಿರ್ಣಯ ತೆಗೆದುಕೊಳ್ಳಲು ಸೂಚಿಸಿತ್ತು.
ಇದನ್ನೂ ಓದಿ:ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರಾಗಿ ಹೀರಾಲಾಲ್ ಸಮರಿಯಾ ಪ್ರಮಾಣ; ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ