ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ಮುಖಂಡ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರದ ಶಿವಸೇನೆ- ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸಿಕೊಂಡಿರುವ ಅಜಿತ್ ಪವಾರ್, ತಮಗೆ ಎನ್‌ಸಿಪಿಯ ಎಲ್ಲ 53 ಶಾಸಕರ ಬೆಂಬಲ ಇದೆ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ತಮ್ಮ ಬೆಂಬಲಿಗರ ಸಂಖ್ಯಾಬಲ ಪ್ರದರ್ಶಿಸಲು ಇಂದು ಮುಂಬೈನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
ಉಭಯ ಬಣಗಳು ಒಂದೇ ದಿನ ತಮ್ಮ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳ ಸಭೆ ಕರೆದಿವೆ. ಎರಡು ಸಭೆಗಳಲ್ಲಿ ಪಾಲ್ಗೊಳ್ಳುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಯಾರ ಬಣ ಮೇಲುಗೈ ಸಾಧಿಸಲಿದೆ ಎಂಬುದು ನಿರ್ಧಾರವಾಗಲಿದೆ. ಅಜಿತ್ ಪವಾರ್ ಅವರೊಂದಿಗೆ ಇದ್ದಾರೆ ಎನ್ನಲಾಗುತ್ತಿರುವ 53 ಶಾಸಕರ ಬೆಂಬಲದ ಸತ್ಯ ಈ ಸಭೆಯಿಂದ ಬಹಿರಂಗವಾಗಲಿದೆ. ಹಾಗಾಗಿ, ಸಭೆ ದೇಶದ ಕುತೂಹಲಕ್ಕೆ ಕಾರಣವಾಗಿದೆ.
ಶಿವಸೇನೆ- ಬಿಜೆಪಿ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭಾನುವಾರ ಅಜಿತ್ ಪವಾರ್, ಇದು ಎನ್‌ಸಿಪಿಯ ಸಾಮೂಹಿಕ ನಿರ್ಧಾರ. ತಮಗೆ ಪಕ್ಷದ ಎಲ್ಲ 53 ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು. ಇದಾದ ನಂತರ, 36 ಶಾಸಕರು ಬೆಂಬಲ ಪತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ಅಜಿತ್ ಪವಾರ್ ಬಣ ಹೇಳಿಕೊಂಡಿತ್ತು. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಬಿಜೆಪಿ ಅಜಿತ್ ಪವಾರ್ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆ 40ಕ್ಕೂ ಹೆಚ್ಚಿದೆ ಎಂದು ಹೇಳಿತ್ತು.
ಆದರೆ, ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಅವರು ಅಜಿತ್ ಪವಾರ್ ಅವರಿಗೆ ಕೇವಲ 13 ಶಾಸಕರ ಬೆಂಬಲ ಮಾತ್ರ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಅಜಿತ್ ಪವಾರ್ ಸೇರಿದಂತೆ ಒಂಬತ್ತು ಶಾಸಕರನ್ನು ಹೊರತುಪಡಿಸಿ ಉಳಿದ ಶಾಸಕರು ಶರದ್ ಪವಾರ್‌ಗೆ ನಿಷ್ಠರಾಗಿದ್ದಾರೆ ಎಂದು ಶರದ್ ಪವಾರ್ ಪಾಳಯ ಹೇಳಿಕೊಂಡಿದೆ. ಹಾಗಾಗಿ ಯಾರಿಗೆ ಹೆಚ್ಚು ಬೆಂಬಲ ಇದೆ? ಎಂದು ಸಾಬೀತು ಮಾಡಲು ಇಂದು ಎರಡು ಬಣಗಳು ತಮ್ಮ ಬೆಂಬಲಿಗರ ಸಭೆ ಕರೆದಿವೆ.