ಇಂದೋರ್:ಮಧ್ಯಪ್ರದೇಶದ ಇಂದೋರ್‌ನ ಜನನಿಬಿಡ ರಸ್ತೆಯಲ್ಲಿ ದುಬಾರಿ ಕಾರಿನಲ್ಲಿ "ಡ್ರಿಫ್ಟಿಂಗ್ ಸಾಹಸ" ಪ್ರದರ್ಶಿಸಿ ನಿಯಮ ಉಲ್ಲಂಘಿಸಿದ ಆರೋಪದಡಿ ಯುವಕನ ಮೇಲೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಸ್ತೆ ಮಧ್ಯೆ ಕಾರನ್ನು ಅಪಾಯಕಾರಿಯಾಗಿ ಸುತ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದೋರ್‌ನ ರಸ್ತೆಯಲ್ಲಿ ರಾತ್ರಿ ವೇಳೆ ಯುವಕನೊಬ್ಬ ಕಾರನ್ನು ವೃತ್ತವೊಂದರಲ್ಲಿ ಏಕಾಏಕಿ ಟರ್ನ್ ತೆಗೆದುಕೊಂಡು ವೃತ್ತಾಕಾರದ ರೀತಿಯಲ್ಲಿ ಚಲಾಯಿಸಿದ್ದಾನೆ. ಇದರಿಂದ ಎದುರಿನ ಕಾರುಗಳು ದೂರಕ್ಕೆ ನಿಲ್ಲುತ್ತವೆ. ಬಳಿಕ ಆತ ಕಾರಿನಲ್ಲೇ ಬೇರೆ ರಸ್ತೆ ಮಾರ್ಗವಾಗಿ ತೆರಳುತ್ತಾನೆ. ಇದು ಅಪಾಯಕಾರಿಯಾಗಿದ್ದು, ತುಸು ನಿಯಂತ್ರಣ ತಪ್ಪಿದರೂ ಕಾರು ಬೇರೊಂದಕ್ಕೆ ಡಿಕ್ಕಿಯಾಗಿ ಅನಾಹುತ ಉಂಟಾಗುವ ಸಾಧ್ಯತೆ ಇತ್ತು. ಯುವಕ ಕಾರು ಡ್ರಿಫ್ಟಿಂಗ್ ಮಾಡುವುದನ್ನು ವಿಡಿಯೋ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರನ್ನು ಜಪ್ತಿ ಮಾಡಿದ್ದಲ್ಲದೇ ರಸ್ತೆ ನಿಯಮ ಉಲ್ಲಂಘನೆಯಡಿ 23 ವರ್ಷದ ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಸಾರ್ವಜನಿಕ ಸ್ಥಳದಲ್ಲಿ ಅತಿ ವೇಗದ ಚಾಲನೆ) ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ನಿಯಮಗಳನುಸಾರ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸ್ ಉಪನಿರೀಕ್ಷಕ ಕಾಜಿಮ್ ಹುಸೇನ್ ರಿಜ್ವಿ ತಿಳಿಸಿದ್ದಾರೆ.
ಆರೋಪಿ ಪರವಾನಗಿ ಅಮಾನತು:ಸ್ಟಂಟ್‌ಗೆ ಬಳಸಿದ್ದ ದುಬಾರಿ ಕಾರನ್ನು ವಶಪಡಿಸಿಕೊಂಡಿದ್ದಲ್ಲದೇ, ಸಂಚಾರಿ ಪೊಲೀಸರ ಶಿಫಾರಸಿನ ಮೇರೆಗೆ ಸಾರಿಗೆ ಇಲಾಖೆ ಆರೋಪಿಯ ವಾಹನ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತುಗೊಳಿಸಿದೆ. "ಆರೋಪಿಯು ಜನನಿಬಿಡ ರಸ್ತೆಯಲ್ಲಿ ಡ್ರಿಫ್ಟಿಂಗ್ ಸ್ಟಂಟ್ ಮಾಡುತ್ತಿದ್ದ ರೀತಿ ಅಪಘಾತಕ್ಕೆ ಕಾರಣವಾಗಬಹುದಿತ್ತು. ಇದು ಚಾಲಕನ ಪ್ರಾಣಕ್ಕೂ ಅಪಾಯವನ್ನುಂಟು ಮಾಡುತ್ತದೆ. ಇತರ ಜನರ ಪ್ರಾಣಕ್ಕೂ ಕುತ್ತು ತರಬಹುದಿತ್ತು. ಹೀಗಾಗಿ ಆತನ ವಿರುದ್ಧ ಕೇಸ್ ಜಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಕಾರು ಅಪಘಾತದಲ್ಲಿ ನಾಲ್ವರು ಸಾವು:ಹಿಮಾಚಲ ಕಡೆಗೆ ಉತ್ತರಾಖಂಡದಿಂದ ಹೊರಟಿದ್ದ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ ನಾಲ್ವರು ಪ್ರಾಣ ಕಳೆದುಕೊಂಡ ಘಟನೆ ಹಿಮಾಚಲಪ್ರದೇಶದಲ್ಲಿ ಈಚೆಗೆ ನಡೆದಿತ್ತು. ಕಾರು ಕ್ವಾನು ಮಿನಾಸ್ ಮೋಟಾರು ಮಾರ್ಗದ ಬಳಿ ಟೊನ್ಸ್ ನದಿಗೆ ಬಿದ್ದಿತ್ತು. ಮೃತಪಟ್ಟ ನಾಲ್ವರು ಪ್ರಯಾಣಿಕರು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಚೌಪಾಲ್ ತಾಲೂಕಿನ ನರ್ವಾದ ನಿವಾಸಿಗಳಾಗಿದ್ದರು. ಕಾರು ನದಿಗೆ ಬಿದ್ದಿರುವ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಮತ್ತು ರಕ್ಷಣಾ ಪಡೆ ಸಿಬ್ಬಂದಿ ಕಾರನಲ್ಲಿದ್ದ ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆದಿದ್ದರು.
ಎದುರಿಗೆ ಬಂದ ಮತ್ತೊಂದು ಕಾರಿನಿಂದ ಅಪಘಾತ ತಪ್ಪಿಸಲು ಹೋದ ಚಾಲಕ ನದಿಗೆ ಕಡೆಗೆ ವಾಹನ ತಿರುಗಿಸಿದ್ದರಿಂದ ಟೊನ್ಸ್ ನದಿಗೆ ಬಿದ್ದಿತ್ತು. ನದಿಯಲ್ಲಿ 350 ಮೀಟರ್ ದೂರದವರೆಗೆ ಕಾರು ತೇಲಿಕೊಂಡು ಹೋಗಿತ್ತು. ಎಸ್‌ಡಿಆರ್‌ಎಫ್ ತಂಡ ತೀವ್ರ ಕಾರ್ಯಾಚರಣೆ ನಡೆಸಿ ನಾಲ್ವರ ಮೃತದೇಹಗಳನ್ನು ಪತ್ತೆ ಮಾಡಿತ್ತು.
ಇದನ್ನೂ ಓದಿ:ದೂರು ನೀಡಲು ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ್ರಾ ಇನ್‌ಸ್ಪೆಕ್ಟರ್? ಡಿಸಿಪಿಗೆ ತನಿಖಾ ವರದಿ ಸಲ್ಲಿಕೆ