ಶಿಮ್ಲಾ (ಹಿಮಾಚಲ ಪ್ರದೇಶ): ಜೂನ್ 24 ರಂದು ಹಿಮಾಚಲ ಪ್ರದೇಶದಲ್ಲಿ ಪ್ರಾರಂಭವಾದ ಮಾನ್ಸೂನ್ಗೆ ಇಡೀ ರಾಜ್ಯವೇ ತತ್ತರಿಸಿದೆ. ಪ್ರವಾಹಕ್ಕೆ ಸಿಲುಕಿದ ಹಿಮಾಚಲ ಪ್ರದೇಶ ಭಾರತ ದೇಶದಲ್ಲೇ ಅತೀ ಹೆಚ್ಚು ಹಾನಿಗೊಳಗಾಗಿರುವ ರಾಜ್ಯವಾಗಿದೆ. ರಾಜ್ಯದಲ್ಲಿ ಸುರಿದ ರಕ್ಕಸ ಮುಂಗಾರಿಗೆ ಇದುವರೆಗೆ ಅಂದಾಜು ಒಟ್ಟು 7,020.28 ಕೋಟಿ ರೂ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಅಧಿಕಾರಿಗಳು ನೀಡಿರುವ ಅಧಿಕೃತ ಮಾಹಿತಿಗಳ ಪ್ರಕಾರ, ಮಳೆ, ಪ್ರವಾಹಕ್ಕೆ ಸಿಲುಕಿ ಇದುವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 257. ಇದರಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರು 66 ಮಂದಿ, ರಸ್ತೆ ಅಪಘಾತ ಮತ್ತು ಗುಡ್ಡ ಕುಸಿತ ಇತರ ಕಾರಣಗಳಿಂದ ಪ್ರಾಣ ಬಿಟ್ಟವರು 191 ಜನರು, ಹಾಗೆ 32 ಜನರು ನಾಪತ್ತೆಯಾಗಿದ್ದಾರೆ. ಅಲ್ಲದೇ ಗಾಯಗೊಂಡವರ ಸಂಖ್ಯೆ 290ಕ್ಕೆ ಏರಿಕೆ ಕಂಡಿದೆ. ಇನ್ನು ಭೀಕರ ಪ್ರವಾಹದಿಂದ 1376 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದರೆ, 7935 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಕೇವಲ ಮನೆಗಳಲ್ಲದೇ, 270 ಅಂಗಡಿಗಳು, 2,727 ಗೋಶಾಲೆಗಳಿಗೆ ತೀವ್ರ ಹಾನಿಗೊಳಗಾಗಿವೆ.
ರಸ್ತೆ ಭೂಕುಸಿತ (ಹಿಮಾಚಲ ರಾಜ್ಯದ ದೃಶ್ಯ) ಕೃಪೆ ANI
ಆಘಾತಕಾರಿ ವಿಚಾರವೆಂದರೆ 2023ನೇ ಸಾಲಿನಲ್ಲಿ ಹಿಮಾಚಲ ರಾಜ್ಯವೊಂದರಲ್ಲೇ 90 ಭೂಕುಸಿತಗಳು ಸಂಭವಿಸಿದ್ದರೆ, 55 ಹಠಾತ್ ಪ್ರವಾಹಗಳುಂಟಾಗಿವೆ. ಪರಿಣಾಮ ರಾಜ್ಯದಲ್ಲಿ 2 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 450 ರಸ್ತೆಗಳನ್ನು ಮುಚ್ಚಲಾಗಿದ್ದು,1,814 ವಿದ್ಯುತ್ ಸರಬರಾಜು ಯೋಜನೆಗಳಿಗೆ ಇನ್ನೂ ಅಡಚಣೆಯಾಗಿದೆ. ಜತೆಗೆ 59 ನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿದೆ.
ಎಡ ಬಿಡದೇ ಸುರಿಯುತ್ತಿರುವ ಮಳೆಯ ಹಿನ್ನೆಲೆ ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಇಂದು ಸಹ ರಜೆ ಘೋಷಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತೆಗದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಕೂಡ ಎಲ್ಲ ಸರ್ಕಾರಿ, ಖಾಸಗಿ ಶಾಲಾ - ಕಾಲೇಜುಗಳನ್ನು ಮುಚ್ಚುವಂತೆ ಅಧಿಸೂಚನೆ ಹೊರಡಿಸಿದ್ದಾರೆ.
ರಸ್ತೆ ಬದಿಯ ಗುಡ್ಡ ಕುಸಿತ(ಹಿಮಾಚಲ ರಾಜ್ಯದ ದೃಶ್ಯ) ಕೃಪೆ ANI
ಇನ್ನು ರಾಜ್ಯದ ಎಲ್ಲ ಮಾಹಿತಿ ಪಡೆದುಕೊಂಡಿರುವ ಸಿಎಂ, ಪ್ರವಾಹದಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ತೀವ್ರ ನಿಗಾವಹಿಸುವಂತೆ ಗೃಹಕಾರ್ಯದರ್ಶಿ, ಮುಖ್ಯಕಾರ್ಯದರ್ಶಿ, ಮತ್ತು ಎಲ್ಲ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮತ್ತು ರಸ್ತೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಳನ್ನು ಸುಗಮವಾಗಿ ನಿರ್ವಹಿಸಬೇಕು ಎಂದು ಆಡಳಿತ ಮಂಡಳಿ ಸಿಬ್ಬಂದಿಗಳಿಗೂ ಎಚ್ಚರಿಕೆ ನೀಡಿದ್ದಾರೆ.
ಪರೀಕ್ಷೆಗಳು ಮುಂದೂಡಿಕೆ: ರಾಜ್ಯದಲ್ಲಿನ ನಿರಂತರ ಮಳೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 14 ರಂದು ನಿಗದಿಯಾಗಿದ್ದ ಬಿಇಡಿ ಪರೀಕ್ಷೆಗಳು ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗು ನಡೆಯುತ್ತಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಅಧಿ ಸೂಚನೆ ಹೊರಡಿಸಿದೆ. ಹಾಗೆ ಶಿಮ್ಲಾ ಮುನ್ಸಿಪಲ್ ಕಾರ್ಪೊರೇಷನ್ ಕೂಡ ಹಿಮ್ಲ್ಯಾಂಡ್ನಲ್ಲಿ ಪ್ರಮುಖ ಭೂಕುಸಿತದ ಹಿನ್ನೆಲೆ ರಜೆ ಘೋಷಿಸಿದೆ.
ಪ್ರವಾಹಕ್ಕೆ ಕಟ್ಟಡದ ಮುಂಭಾಗ ಕುಸಿದಿರುವುದು (ಹಿಮಾಚಲ ರಾಜ್ಯದ ದೃಶ್ಯ) ಕೃಪೆ ANI
ಕೆಲವು ರಸ್ತೆಗಳು ಪುನಾರಂಭ:ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆ ಮುಚ್ಚಲಾಗಿದ್ದ ಹಲವಾರು ರಸ್ತೆಗಳನ್ನು ಸಂಚಾರಕ್ಕೆ ಮರು ತೆರೆಯಲಾಗಿದೆ. ಇವುಗಳಲ್ಲಿ ರಾಷ್ಟ್ರೀಯ ಹೆದ್ದಾರಿ-05, ರಾಷ್ಟ್ರೀಯ ಹೆದ್ದಾರಿ-205 ಮತ್ತು ರಾಷ್ಟ್ರೀಯ ಹೆದ್ದಾರಿ-907A ಬಳಿ ಇರುವ ಪ್ರಮುಖ ರಸ್ತೆಗಳು ಇವೆ. ರಾಷ್ಟ್ರೀಯ ಹೆದ್ದಾರಿ 05 ನಲ್ಲಿ ಸುಮಾರು 11 ರಸ್ತೆಗಳನ್ನು ಸಂಚಾರಕ್ಕೆ ತೆರೆಯಲಾಗಿದೆ. ಕೆಲವೆಡೆ ತುರ್ತು ಸಂಚಾರಕ್ಕಾಗಿ ಒಂದು ಮಾರ್ಗವನ್ನು ಮಾತ್ರ ತೆರೆಯಲಾಗಿದೆ.
ಅವುಗಳೆಂದರೆ ಪರ್ವಾನೂ - ದಾತ್ಯಾರ್, ದಾತ್ಯಾರ್-ಚಾಕಿಮೋರ್ ರಸ್ತೆ, ಚಾಕಿಮೋರ್-ಜಾಬ್ಲಿ ರಸ್ತೆ, ಜಾಬ್ಲಿ-ಧರಂಪುರ ರಸ್ತೆಗಳನ್ನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಭಾರತೀಯ ಹವಾಮಾನ ಕೇಂದ್ರವು ರಾಜ್ಯದ ಹಲವೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಮೇಘಸ್ಫೋಟಕ್ಕೆ ಗ್ರಾಮವೇ ನಾಶ.. ಅವಶೇಷಗಳಡಿ ಸಿಲುಕಿದ ಐವರ ಶವಗಳನ್ನ ಹೊರತೆಗೆದ ರಕ್ಷಣಾ ಪಡೆ