ಲಖನೌ (ಉತ್ತರ ಪ್ರದೇಶ):''ಉತ್ತರ ಪ್ರದೇಶದಲ್ಲಿ ವಾಹನಗಳ ಮೇಲೆ ಜಾತಿಯ ಹೆಸರುಗಳನ್ನು ಬರೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಇಡೀ ರಾಜ್ಯದಲ್ಲಿ ಕಟ್ಟುನಿಟ್ಟಿನ ತಪಾಸಣೆ ಅಭಿಯಾನ ನಡೆಸಲಾಗುವುದು. ಈ ವಿಷಯದಲ್ಲಿ ಪೊಲೀಸರ ಮೇಲೆ ಯಾರೂ ಶಿಫಾರಸು ಕೆಲಸ ಮಾಡುವುದಿಲ್ಲ, ಮಾಡಬಾರದು'' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದರೊಂದಿಗೆ ಅಕ್ರಮವಾಗಿ ವಾಹನ ನಿಲ್ದಾಣ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಸರಗಳ್ಳತನ ಮತ್ತು ಸಣ್ಣಪುಟ್ಟ ಘಟನೆಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರಥಮ ಮಾಹಿತಿ ವರದಿಯನ್ನು ನೋಂದಾಯಿಸುವ ಮೊದಲು, ಪ್ರಾಥಮಿಕ ವಿಚಾರಣೆ ಮಾಡುವ ಮುನ್ನ ಮಾಹಿತಿ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಥಮ ಮಾಹಿತಿ ವರದಿ ನೋಂದಾಯಿಸುವ ಮೊದಲು ಖಚಿತಪಡಿಸಿಕೊಳ್ಳಿ:ರಾಜ್ಯದಲ್ಲಿ ಸುಲಭ ವ್ಯಾಪಾರ, ವಹಿವಾಟು ಮಾಡಲು ಯಾವುದೇ ಅಡ್ಡಿಯಾಗಬಾರದು. ಯಾವುದೇ ಉದ್ಯಮಿ, ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕಟ್ಟಡ ನಿರ್ಮಾಣಕಾರರು, ಹೋಟೆಲ್ ರೆಸ್ಟೋರೆಂಟ್ ಇತ್ಯಾದಿಗಳಿಗೆ ಸಂಬಂಧಿಸಿದ ಮಾಲೀಕರು ಮತ್ತು ನಿರ್ವಹಣಾ ಹಂತದ ಉದ್ಯೋಗಿಗಳಿಗೆ ಯಾವುದೇ ರೀತಿಯಲ್ಲಿ ಕಿರುಕುಳ ನೀಡಬಾರದು. ಸುಲಭ ವ್ಯಾಪಾರ, ವಹಿವಾಟು ಮಾಡಲು ಅನುವು ಮಾಡಿಕೊಟಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.