ತಿರುವನಂತಪುರಂ(ಕೇರಳ): ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿರುದ್ಧದ ರಾಜಕೀಯ ಸಮರದಲ್ಲಿ ಎಡರಂಗ ರಾಜಭವನಕ್ಕೆ ಮುತ್ತಿಗೆ ಹಾಕಿ ತಮ್ಮ ಶಕ್ತಿ ಪ್ರದರ್ಶಿಸಿತು. ಉನ್ನತ ಶಿಕ್ಷಣ ಸಂರಕ್ಷಣಾ ಸಮಿತಿ ಹೆಸರಿನಲ್ಲಿ ರಾಜ್ಯಪಾಲರ ವಿರುದ್ಧ ಎಲ್ಡಿಎಫ್ ನಾಯಕರು ತೀವ್ರ ಟೀಕೆ ಮಾಡಿದರು. ರಾಜ್ಯಪಾಲರು ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟಿಸಿದರು.
ಸಂಘಪರಿವಾರದ ಹಿಂದೂ ರಾಷ್ಟ್ರ ಸಿದ್ಧಾಂತವನ್ನು ಜಾರಿಗೆ ತರಲು ರಾಜ್ಯಪಾಲರು ಯತ್ನಿಸುತ್ತಿದ್ದಾರೆ. ರಾಜ್ಯಪಾಲರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಚುನಾಯಿತ ಸರ್ಕಾರದ ನೀತಿಗಳ ವಿರುದ್ಧ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೇರಳ ಅದನ್ನು ವಿರೋಧಿಸುತ್ತದೆ ಎಂದು ಪ್ರತಿಭಟನೆ ಉದ್ಘಾಟಿಸಿ ಯೆಚೂರಿ ಹೇಳಿದರು.