ಹೈದರಾಬಾದ್:ತೆಲಂಗಾಣ ರಾಜ್ಯ ಸಾರ್ವಜನಿಕ ಆಡಳಿತ ಸೇವೆ(ಟಿಎಸ್ಪಿಎಸ್ಸಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣವನ್ನು ಬೇಗಂಬಜಾರ್ ಠಾಣೆಯಿಂದ ಸಿಸಿಎಸ್ಗೆ ಬುಧವಾರ ವರ್ಗಾಯಿಸಲಾಗಿದೆ. ಎಸ್ಐಟಿ ಮುಖ್ಯಸ್ಥ ಎ.ಆರ್. ಶ್ರೀನಿವಾಸ್ ತನಿಖೆ ಚುರುಕುಗೊಳಿಸಿದ್ದು, ಗುರುಕುಲ ಉಪಾಧ್ಯಾಯರಾದ ಎಲ್. ರೇಣುಕಾ ರಾಥೋಡ್ ತಮ್ಮ ಕಿರಿಯ ಸಹೋದರನ ಹೆಸರಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪರೀಕ್ಷೆ ಬರೆಯಲು ಅರ್ಹತೆ ಇಲ್ಲದ ಸಹೋದರರನ್ನು ತೋರಿಸಿ ಇತರೆ ಅಭ್ಯರ್ಥಿಗಳೊಂದಿಗೆ ಮುಂಗಡವಾಗಿ ಡೀಲ್ ಮಾಡಿಕೊಂಡು ಲಕ್ಷಗಟ್ಟಲೇ ಹಣ ಕೊಡುವ ತಂತ್ರ ಹೆಣೆದಿದ್ದಾರೆ. ಪ್ರಮುಖ ಆರೋಪಿ ಆಯೋಗದ ಕಾರ್ಯದರ್ಶಿಯ ಆಪ್ತ ಸಹಾಯಕ ಪ್ರವೀಣ್ ಕುಮಾರ್, ಸಿಸ್ಟಂ ಅಡ್ಮಿನಿಸ್ಟ್ರೇಟರ್ ರಾಜಶೇಖರ್ ನೆರವಿನೊಂದಿಗೆ ಸಹಾಯಕ ಎಂಜಿನಿಯರ್ ಸಿವಿಲ್ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ರೇಣುಕಾ ಅವರ ಕಿರಿಯ ಸಹೋದರ ರಾಜೇಶ್ವರ ನಾಯ್ಕ್ ಎಇ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಲ್ಲ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಟಿಟಿಸಿ ಮುಗಿಸಿರುವ ರಾಜೇಶ್ವರ್ ಸ್ವಗ್ರಾಮದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ. ಪ್ರಮುಖ ಆರೋಪಿ ರೇಣುಕಾ ಎಇ ಪ್ರಶ್ನೆಪತ್ರಿಕೆಗಳನ್ನು ಆತನ ಹೆಸರಿನಲ್ಲಿ ಪಡೆದು ಮಹೆಬೂಬ್ ನಗರ ಜಿಲ್ಲೆಯ ಕೆ.ನೀಲೇಶ್ ನಾಯ್ಕ್ ಹಾಗೂ ಗೋಪಾಲ್ ನಾಯ್ಕ್ ಎಂಬುವರಿಗೆ 14 ಲಕ್ಷ ರೂ.ಗೆ ಕೊಡುವುದಾಗಿ ಡೀಲ್ ಮಾಡಿದ್ದರು. ಪ್ರಶ್ನೆಪತ್ರಿಕೆ ಪಡೆದ ರೇಣುಕಾ ಬಾಲಾಪುರ ಕ್ರಾಸ್ ರಸ್ತೆಯಲ್ಲಿ ಪ್ರವೀಣ್ ಎಂಬಾತನಿಗೆ 5 ಲಕ್ಷ ರೂ. ನೀಡಿದ್ದರು.
ಬಳಿಕ 14 ಲಕ್ಷ ರೂಪಾಯಿ ಪಡೆದು ಅದೇ ಪ್ರಶ್ನೆಪತ್ರಿಕೆಯನ್ನು ಎಲ್ಬಿ ನಗರದ ಲಾಡ್ಜ್ನಲ್ಲಿ ನೀಲೇಶ್ ಮತ್ತು ಗೋಪಾಲ್ಗೆ ನೀಡಿದ್ದಾರೆ. ಅವರು ಆ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ತಿಳಿದುಕೊಂಡು ಪರೀಕ್ಷೆಗೆ ಸಿದ್ಧರಾಗಿದ್ದರು. ಪರೀಕ್ಷೆ ಮುಗಿದ ನಂತರ ಯಾವುದೇ ಅನುಮಾನ ಬಾರದಂತೆ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಉಳಿದ 5 ಲಕ್ಷ ರೂ.ಗಳೊಂದಿಗೆ ಪ್ರಶ್ನೆ ಪತ್ರಿಕೆಯನ್ನು ಪ್ರವೀಣ್ ಕೈಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಹೋದರ ರಾಜೇಶ್ವರ್ ನಾಯ್ಕ ಕೂಡ ಸಹಕಾರ ನೀಡಿದ್ದರು ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.