ಹೈದರಾಬಾದ್: 21 ವರ್ಷದ ಮಾಡೆಲ್ ಹರ್ನಾಜ್ ಸಂಧು ಅವರು ಭಾರತಕ್ಕೆ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟವನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ದೇಶದ ಮಗಳು ಹರ್ನಾಜ್ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದ್ದು, ಈ ಐತಿಹಾಸಿಕ ಗೆಲುವಿಗಾಗಿ ಹರ್ನಾಜ್ಗೆ ದೇಶದ ಮೂಲೆ ಮೂಲೆಯಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಬಾಲಿವುಡ್ ನಿಂದಲೂ ಹರ್ನಾಜ್ ಗೆ ಅಭಿನಂದನೆಗಳು ಹರಿದು ಬರುತ್ತಿವೆ. ಹಾಗೆಯೇ ದೇಶದ ಎರಡನೇ ಭುವನ ಸುಂದರಿ (2000) ಮತ್ತು ನಟಿ ಲಾರಾ ದತ್ತಾ ಕೂಡ ಅವರನ್ನು ಅಭಿನಂದಿಸಿದ್ದಾರೆ.
'ಅಭಿನಂದನೆಗಳು ಹರ್ನಾಜ್ ಸಂಧು, ಕ್ಲಬ್‌ಗೆ ಸ್ವಾಗತ, ನಾವು ಕಳೆದ 21 ವರ್ಷಗಳಿಂದ ಕಾಯುತ್ತಿದ್ದೆವು. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ಲಕ್ಷಾಂತರ ಕನಸುಗಳು ನನಸಾಗಿವೆ. ಎಂದು ಹರ್ನಾಜ್ ಸಂಧು ಸಾಧನೆ ಬಗ್ಗೆ ಬಾಲಿವುಡ್ ನಟಿ ಲಾರಾ ದತ್ತಾ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ನಟಿ ಲಾರಾ ದತ್ತಾ ಅವರು 13 ಮೇ 2000 ರಂದು ಭುವನ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದೇಶದ ಹೆಸರನ್ನು ಬೆಳಗಿಸಿದ್ದರು. ಹಾಗೆ ಮತ್ತೊಬ್ಬ ದೇಶದ ಮಗಳು ಮತ್ತು ನಟಿ ಸುಶ್ಮಿತಾ ಸೇನ್ ಅವರು ಸಹ ದೇಶಕ್ಕೆ ಭುವನ ಸುಂದರಿ (1994) ಪಟ್ಟವನ್ನು ತಂದ ಮೊದಲಿಗರು.