ಕುಲ್ಲು(ಹಿಮಾಚಲ ಪ್ರದೇಶ):ಭಾರತದಾದ್ಯಂತ ಪೊಲೀಸ್ ಇಲಾಖೆಗಳು ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಫನ್ ಮತ್ತು ಹೊಸ ಮಾರ್ಗಗಳನ್ನು ಬಳಸಲಾರಂಭಿಸಿದ್ದಾರೆ. ಇದೀಗ, ಕುಲ್ಲು ಪೊಲೀಸರು ರಸ್ತೆ ಸುರಕ್ಷತೆಯ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಲು ಹಾಸ್ಯಭರಿತ ಎಚ್ಚರಿಕೆಯ ಫಲಕ ಹಾಕಿರುವುದು ಇಂಟರ್ನೆಟ್ನಲ್ಲಿ ಟ್ರೆಂಡ್ ಆಗುತ್ತಿದೆ.
ಅಜ್ನಾಸ್ ಕೆವಿ ಎಂಬವರು ಮದ್ಯಪಾನ ಮತ್ತು ಚಾಲನೆ ವಿರುದ್ಧ ಸಲಹೆ ನೀಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಕುಡಿದು ವಾಹನ ಚಲಾಯಿಸಬೇಡಿ, ಮನಾಲಿ ಜೈಲಿನಲ್ಲಿ ವಿಪರೀತ ಚಳಿ ಇದೆ’ ಎಂದು ಎಚ್ಚರಿಕೆಯ ಸಂದೇಶ ಬರೆಯಲಾಗಿದೆ. ಸೈನ್‌ಬೋರ್ಡ್‌ನಲ್ಲಿ ಧೂಮಪಾನದ ಕುರಿತು 'ಸಿಗರೇಟ್ ಶ್ವಾಸಕೋಶವನ್ನು ಸುಡುತ್ತದೆ' ಎಂದೂ ಬರೆಯಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಾಗಿನಿಂದ ಸಾಕಷ್ಟು ವೈರಲ್ ಆಗುತ್ತಿದ್ದು, ಆರು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 3,00,000 ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಅದರೊಂದಿಗೆ ಬಹಳಷ್ಟು ಕಾಮೆಂಟ್ಗಳು ಹರಿದು ಬಂದಿವೆ. ಕೆಲವರು ಈ ಹೊಸ ಪ್ರಯತ್ನಗಳನ್ನು ಮೆಚ್ಚಿ ಕಾಮೆಂಟ್ಗಳನ್ನು ಹಾಕಿದರೆ ಇನ್ನೂ ಕೆಲವರು ಅಲ್ಲಿರುವ ತಮಾಷೆಯ ಸಾಲುಗಳಿಗೆ ತಮಾಷೆಯ ಕಾಮೆಂಟ್ಗಳನ್ನು ಬರೆದಿದ್ದಾರೆ.
ಇತ್ತೀಚೆಗೆ ದೆಹಲಿ ಪೊಲೀಸರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ರಸ್ತೆ ಸುರಕ್ಷತಾ ಜಾಗೃತಿಯನ್ನು ಮೂಡಿಸಿದ್ದರು. ಯುವಕನೊಬ್ಬ ಬೈಕ್ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿ ಹೆಚ್ಚು ವೇಗವಾಗಿ ವಾಹನ ಓಡಿಸದೆ ಸುರಕ್ಷಿತವಾಗಿರಿ ಎನ್ನುವ ಸಂದೇಶ ಸಾರುವ ವಿಡಿಯೋವನ್ನು ಟ್ರಾಫಿಕ್ ಪೊಲೀಸ್ ಇಲಾಖೆಯು ಹಂಚಿಕೊಂಡಿತ್ತು. ವಿಡಿಯೋ ಹಿನ್ನೆಲೆಯಲ್ಲಿ 'ಮೇರಿ ಮರ್ಜಿ' ಎಂಬ ಹಿಂದಿ ಹಾಡು ಪ್ಲೇ ಆಗುತ್ತಿದ್ದು, ಶೀರ್ಷಿಕೆಯಲ್ಲಿ, "ರೋಡ್ ಬೈ ನಹೀ ಚಲೇಗಿ ತುಮ್ಹಾರಿ ಮರ್ಜಿ. ಐಸೆ ಸ್ಟಂಟ್ಸ್ ಕರೋಗೆ ತೋ ಜೋಡ್ನೆ ಕೆ ಲಿಯೇ ಭಿ ನಹಿ ಮಿಲೇಗಾ ಕೋಯಿ ದರ್ಜಿ!" ಎಂದು ಬರೆಯಲಾಗಿತ್ತು.
ಇದನ್ನೂ ಓದಿ :ಕೈಮಗ್ಗದ ಬಟ್ಟೆಗೆ ಪ್ರೋತ್ಸಾಹ; ತೆಲಂಗಾಣದಲ್ಲಿ ಟ್ರೆಂಡ್ ಹುಟ್ಟುಹಾಕಿದ ಐಎಎಸ್ ಅಧಿಕಾರಿ